Advertisement

ರಾಗಿ ಖರೀದಿ ವಿಳಂಬ ಧೋರಣೆಗೆ ಆಕ್ರೋಶ

02:57 PM Jun 03, 2022 | Team Udayavani |

ಹರಪನಹಳ್ಳಿ: ಪಟ್ಟಣದ ಎಪಿಎಂಸಿಯಲ್ಲಿ ರಾಗಿ ಖರೀದಿಸಲು ವಿಳಂಬ ಧೋರಣೆ ಅನುಸರಿಸಲಾಗುತ್ತಿದ್ದು, ಕೂಡಲೇ ಈ ವಿಳಂಬ ನೀತಿ ಕೈಬಿಟ್ಟು ರಾಗಿ ಖರೀದಿಸಬೇಕೆಂದು ಆಗ್ರಹಿಸಿ ರಾಗಿ ಬೆಳೆಗಾರರು ಹರಪನಹಳ್ಳಿ-ಕೊಟ್ಟೂರು ರಸ್ತೆಯನ್ನು ಬಂದ್‌ ಮಾಡಿ ಗುರುವಾರ ಪ್ರತಿಭಟನೆ ನಡೆಸಿದರು.

Advertisement

ರಾಗಿ ಖರೀದಿಸಲು ನೋಂದಣಿ ಮಾಡಿಕೊಂಡ ರೈತರಿಗೆ ಟೋಕನ್‌ ನೀಡಿದ್ದಾರೆ. ಟೋಕನ್‌ ಪ್ರಕಾರ ರೈತರ ರಾಗಿಯನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೂ ಸಮರ್ಪಕವಾದ ಲಾರಿಗಳು ಇಲ್ಲದ ಕಾರಣ ರಾಗಿ ಚೀಲಹೊತ್ತ ಟ್ರ್ಯಾಕ್ಟರ್‌ಗಳು ಎಪಿಎಂಸಿ ಪ್ರಾಂಗಣದಲ್ಲಿ ಸಾಲುಗಟ್ಟಿ ನಿಂತು ಸ್ಥಳ ಇಲ್ಲದಂತಾಗಿ ರೈತರು ಪರದಾಡುವಂತಾಗಿತ್ತು.

ರೈತರಿಗೆ ಬಿತ್ತನೆ ಕಾರ್ಯಗಳು ಇದ್ದು, ಬಿತ್ತನೆಗೆ ಸಿದ್ಧತೆಗೊಳಿಸಲು ಟ್ರ್ಯಾಕ್ಟರ್‌ ಯಂತ್ರಗಳು ಇಲ್ಲದೆ ಕಳೆದ ನಾಲ್ಕು ಐದು ದಿನಗಳಿಂದ ರಾಗಿಯನ್ನು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಬಂದಿದ್ದೇವೆ. ಆದರೆ ಸಮರ್ಪಕವಾದ ಲಾರಿಗಳು ಇಲ್ಲದೆ ಕಾಲಹರಣ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕ್ರಮವಹಿಸಬೇಕು ಎಂದು ರೈತ ಸಂಘಟನೆಗಳು ಹಾಗೂ ರೈತರು ಪಟ್ಟು ಹಿಡಿದು ರಸ್ತೆಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ಡಾ| ಶಿವಕುಮಾರ ಬಿರಾದಾರ, ಸಿಪಿಐ ನಾಗರಾಜ ಕಮ್ಮಾರ, ಪಿಎಸ್‌ಐ ಸಿ.ಪ್ರಕಾಶ್, ಆಹಾರ ನಿರೀಕ್ಷಕ ಸಂಜಯ ಸೇರಿದಂತೆ ಇತರೆ ಅಧಿಕಾರಿಗಳು ರೈತರನ್ನು ಮನವೊಲಿಸಿ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ತೆರವುಗೊಳಿಸಿದರು.

ನಂತರ ಎಪಿಎಂಸಿ ಆವರಣದಲ್ಲಿಯೇ ರೈತರ ಸಮ್ಮುಖದಲ್ಲಿ ಲಾರಿ ಏಜೆನ್ಸಿದಾರರು ಹಾಗೂ ಸಂಬಂಧಿಸಿದ ಮೇಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ತಿಳಿಗೊಳಿಸಲು ಮುಂದಾದರು, ಆದರೂ ರೈತರು ನೀವು ಏನಾದರೂ ಮಾಡಿಕೊಳ್ಳಿ. ನಮ್ಮ ರಾಗಿಯನ್ನು ತ್ವರಿತವಾಗಿ ಖರೀದಿಸಿ, ಕೃಷಿ ಚಟುವಟಿಕೆಗಳಿಗೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

Advertisement

ನಂತರ ರೈತರನ್ನು ಸಮಾಧಾನ ಪಡಿಸಲು ಮುಂದಾದ ತಹಶೀಲ್ದಾರರು, ದಾವಣಗೆರೆ ಖರೀದಿ ಮೇಲಾಧಿಕಾರಿಗಳೊಂದಿಗೆ ಸಂಪರ್ಕಿಸಿ ತಾತ್ಕಾಲಿಕವಾಗಿ ರೈತರ ರಾಗಿ ಖರೀದಿಸಿ ಗೋದಾಮಿನಲ್ಲಿ ಸಂಗ್ರಹಿಸಿ ನಂತರ ಲಾರಿಗಳ ಮೂಲಕ ಸಾಗಿಸಲು ಮನವಿ ಮಾಡಿಕೊಂಡರು. ಎಪಿಎಂಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಆವರಣದಲ್ಲಿರುವ ಗೋದಾಮಿಗೆ ತುಂಬಲು ಸೂಚಿಸಿ ರಾಗಿ ಖರೀದಿಸಲು ಆರಂಭಿಸಿದರು.

ಭೈರಾಪುರ ಗ್ರಾಮದಲ್ಲಿ ರಾಗಿಯನ್ನು ಶೇಖರಿಸುವ ಗೋದಾಮಿನಲ್ಲಿ ಅನ್‌ಲೋಡ್‌ ಮಾಡಲು ತಡವಾಗುತ್ತಿದ್ದು, ಈ ಹಿನ್ನೆಲೆ ಲೋಡ್‌ ತುಂಬಿದ ಲಾರಿಗಳು ಅಲ್ಲಿಯೇ ಬಿಡುಬಿಟ್ಟ ಕಾರಣ ಲಾರಿಗಳ ಕೊರತೆಯಾಗಿ ಹರಪನಹಳ್ಳಿ ಕೇಂದ್ರದಲ್ಲಿ ಲಾರಿಗಳು ಇಲ್ಲದೆ ರಾಗಿ ತೂಕದ ಕೆಲಸ ವಿಳಂಬವಾಗಿದೆ ಎಂದು ಖರೀದಿದಾರರು ತಿಳಿಸಿದರು.

ಈ ಸಂದರ್ಭದಲ್ಲಿ ಖರೀದಿದಾರರಾದ ವೆಂಕೋಬ್‌, ನವೀನ್‌, ಲಾರಿ ಏಜೆನ್ಸಿದಾರರಾದ ಬೇಲ್ದಾರ ಭಾಷುಸಾಬ್‌, ಎಎಸ್‌ಐ ನಿಂಗಪ್ಪ, ಜಾತಪ್ಪ, ರುದ್ರಪ್ಪ, ರೈತ ಸಂಘಟನೆಯ ಮುಖಂಡರಾದ ದ್ಯಾಮಜ್ಜಿ ಹನುಮಂತಪ್ಪ, ಗೌರಿಹಳ್ಳಿ ಹನುಮಂತಪ್ಪ, ರೈತರಾದ ನಾಗಪ್ಪ, ಓಬಾಳಪುರ ಸಿದ್ದೇಶ್‌, ಹಮಾಲರ ಸಂಘದ ಅಧ್ಯಕ್ಷ ಚಿಕ್ಕೇರಿ ಬಸಪ್ಪ, ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next