ಮುಂಬಯಿ: ಕಾಲೇಜಿನ ನೂತನ ಸಮವಸ್ತ್ರ ನಿಯಮದಿಂದಾಗಿ ಬುರ್ಖಾ ಧರಿಸಿಕೊಂಡು ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜಿಗೆ ಪ್ರವೇಶ ನಿಷೇಧಿಸಿದ ಘಟನೆ ಮುಂಬಯಿಯ ಚೆಂಬೂರಿನ ಕಾಲೇಜಿನಲ್ಲಿ ನಡೆದಿರುವುದು ವರದಿಯಾಗಿದೆ.
ಚೆಂಬೂರಿನ ಎನ್‌ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜಿನ ಹೊಸ ಸಮವಸ್ತ್ರ ನಿಯಮದ ಪ್ರಕಾರ ಬುರ್ಖಾ, ಹಿಜಾಬ್, ಶಿರೋವಸ್ತ್ರಗಳು ಮತ್ತು ಸ್ಟಿಕ್ಕರ್‌ಗಳನ್ನು ಹಾಕಿಕೊಂಡು ಬರುವಂತಿಲ್ಲ. ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸಿಕೊಂಡು ಬಂದಿರುವುದಕ್ಕೆ ಅವರನ್ನು ಕಾಲೇಜಿನ ಗೇಟ್ ನಲ್ಲೇ ತಡೆದು ನಿಲ್ಲಿಸಲಾಗಿದೆ.
ಈ ಮಾಹಿತಿ ವಿದ್ಯಾರ್ಥಿನಿಯರ ಪೋಷಕರಿಗೂ ತಲುಪಿದ್ದು, ಕಾಲೇಜಿನ ಮುಂದೆ ಪ್ರತಿಭಟನೆಯನ್ನು ಆರಂಭಿಸಿದ್ದಾರೆ. ವಿದ್ಯಾರ್ಥಿನಿಯರು ಹಾಗೂ ಪೋಷಕರ ಪ್ರತಿಭಟನೆ ಜೋರಾಗುತ್ತಿದ್ದಂತೆ, ಕಾಲೇಜಿನ ಪ್ರಾಂಶುಪಾಲರು ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
“ಈ ವರ್ಷ ನೂತನವಾಗಿ ಕಾಲೇಜಿನಲ್ಲಿ ಸಮವಸ್ತ್ರ ನಿಯಮವನ್ನು ಜಾರಿಗೆ ತಂದಿದ್ದೇವೆ. ಈ ಬಗ್ಗೆ ಮೇ.1 ರಂದು ಪೋಷಕರ ಜೊತೆ ಸಭೆ ನಡೆಸಿ ಅವರ ಬಳಿ ಬುರ್ಖಾ, ಹಿಜಾಬ್, ಶಿರೋವಸ್ತ್ರಗಳು ಮತ್ತು ಸ್ಟಿಕ್ಕರ್‌ಗಳನ್ನು ಕಾಲೇಜಿನ ಒಳಗೆ ನಿಷೇಧಿಸುವ ಕುರಿತು ಚರ್ಚೆ ನಡೆಸಿಯೇ ಇದನ್ನು ಜಾರಿಗೆ ತಂದಿದ್ದೇವೆ. ಆಗ ಎಲ್ಲದಕ್ಕೂ ಒಪ್ಪಿಗೆ ಕೊಟ್ಟಿದ್ದಾರೆ. ಈಗ ಅದೇ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಡ್ರೆಸ್ ಕೋಡ್ ನ್ನು ವಿರೋಧಿಸುವ ಯಾವುದೇ ವಿದ್ಯಾರ್ಥಿನಿಯರು ಕಾಲೇಜು ಬಿಟ್ಟು ಹೋಗಲು ಅವಕಾಶವಿದೆ” ಎಂದು ಕಾಲೇಜಿನ ಪ್ರಾಂಶುಪಾಲೆ ವಿದ್ಯಾ ಗೌರಿ ಲೇಲೆ ಹೇಳಿದ್ದಾರೆ.
ಪ್ರತಿಭಟನೆ ಜೋರಾಗುತ್ತಿದ್ದಂತೆ ಕಾಲೇಜಿಗೆ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇದಾದ ಬಳಿಕ ಕೆಲ ವಿದ್ಯಾರ್ಥಿನಿಯರು ತಮಗೆ ಸ್ಕಾರ್ಫ್‌ಗಳನ್ನು ಧರಿಸಲು ಅನುಮತಿಯನ್ನು ನೀಡಿಯೆಂದು ಮನವಿ ಮಾಡಿದ್ದಾರೆ.
ಸಂಜೆಯ ವೇಳೆಗೆ ಕಾಲೇಜು ಹೇಳಿಕೆ ಬಿಡುಗಡೆ ಮಾಡಿದ್ದು, ವಿದ್ಯಾರ್ಥಿನಿಯರು ಬುರ್ಖಾ, ಹಿಜಾಬ್ ಅಥವಾ ಸ್ಕಾರ್ಫ್ ಧರಿಸಿಕೊಂಡು ಕಾಲೇಜಿನ ಒಳಗೆ ಬರಬಹುದು,ಆದರೆ ಅದನ್ನು ತೆಗೆದು ಕ್ಲಾಸ್ ರೂಮ್ ನೊಳಗೆ ಹೋಗಬೇಕು. ಸಂಜೆ ಮತ್ತೆ ಧರಿಸಿಕೊಂಡು ಹೋಗಬಹುದೆಂದು ಹೇಳಿಕೆ ಬಿಡುಗಡೆ ಮಾಡಿದೆ.
ಸದ್ಯ ಕಾಲೇಜಿನ ನಿಯಮವನ್ನು ವಿರೋಧಿಸಿ ಮಾಡಿರುವ ಪ್ರತಿಭಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.