ರಾಯಚೂರು: ವಜಾಗೊಳಿಸಿದ ರಿಮ್ಸ್‌ನ 36 ನರ್ಸಿಂಗ್ ಸಿಬ್ಬಂದಿಯನ್ನು ಮರು ನೇಮಕ ಮಾಡಿಕೊಳ್ಳಬೇಕು, ವೇತನ ಹೆಚ್ಚಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಟಿಯುಸಿಐ ನೇತೃತ್ವದಲ್ಲಿ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು. ಈ ಕುರಿತು ಜಿಲ್ಲಾಧಿಕಾರಿ ಮೂಲಕ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿ, ಕಾರ್ಮಿಕ ಕಾಯ್ದೆ ಹಾಗೂ ಸರ್ಕಾರ ನಿಯಮ ಉಲ್ಲಂಘಿಸಿ 36 ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ವೇತನ ಹೆಚ್ಚಿಸುವಂತೆ ಕೇಳಿದ ಮಾತ್ರಕ್ಕೆ ಹೀಗೆ ಕಾರ್ಮಿಕರನ್ನು ಅತಂತ್ರಗೊಳಿಸಿರುವುದು ಖಂಡನೀಯ ಎಂದು ಧರಣಿ ನಿರತರು ದೂರಿದರು. ಸುಪ್ರೀಂಕೋರ್ಟ್ ನಿರ್ದೇಶನದಂತೆ ರಚನೆಯಾದ ವೇತನ ತಾರತಮ್ಯ ನಿವಾರಣಾ ಸಮಿತಿಯು ನರ್ಸಿಂಗ್ ಸಿಬ್ಬಂದಿಗೆ ಮಾಸಿಕ 15ರಿಂದ 22 ಸಾವಿರ ರೂ. ವೇತನ ನೀಡಬೇಕು ಎಂದು ಶಿಫಾರಸು ಮಾಡಿದೆ. ಆದರೂ ರಿಮ್ಸ್ ಪ್ರಭಾರ ನಿರ್ದೇಶಕಿ ಡಾ| ಕವಿತಾ ಪಾಟೀಲ ಅದರಂತೆ ನಡೆದುಕೊಳ್ಳುತ್ತಿಲ್ಲ. ರಿಮ್ಸ್, ಓಪೆಕ್ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನಲ್ಲಿ ದುಡಿಯುವ ಸಿ ಹಾಗೂ ಡಿ ಗ್ರೂಪ್ ಕಾರ್ಮಿಕರಿಗೆ ಭದ್ರತೆ ಇಲ್ಲ. ಕಾಯ್ದೆ ಉಲ್ಲಂಘಿಸಿ ಕಡಿಮೆ ಕೂಲಿ ನೀಡುತ್ತಿದ್ದು, ಹೆಚ್ಚು ಕಾಲ ದುಡಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು. 1.27 ಕೋಟಿ ರೂ. ವೆಚ್ಚದಲ್ಲಿ ರಿಮ್ಸ್‌ನಲ್ಲಿ ಬೆಂಗಳೂರು ಮೂಲದ ದೀಪಾ ಲೈಟಿಂಗ್ ಸಿಸ್ಟಮ್ ಕಂಪೆನಿಯಿಂದ 1,217 ಸೋಲಾರ್ ಹೋಮ್ ಲೈಟ್ಸ್ ಹಾಗೂ 89 ಸೋಲಾರ್ ಸ್ಟ್ರೀಟ್ ಲೈಟ್ ಖರೀದಿಸಿ ಅಳವಡಿಸಲಾಗಿದೆ. ಈ ಕುರಿತು ಥರ್ಡ್‌ಪಾರ್ಟಿ
ಸಮೀಕ್ಷೆ ನಡೆಸಿಲ್ಲ. ಟೆಂಡರ್ ಕರೆಯದೆ ಖರೀದಿ ಆದೇಶ ಹೊರಡಿಸಲಾಗಿದೆ ಎಂದು ದೂರಿದರು. ನಿರ್ದೇಶಕಿ ಡಾ| ಕವಿತಾ ಪಾಟೀಲ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ಕೂಡಲೇ ಅವರನ್ನು ಅಮಾನತು ಮಾಡಬೇಕು. ಸೋಲಾರ್ ದೀಪಗಳ ಖರೀದಿ ಕುರಿತು ತನಿಖೆ ನಡೆಸಬೇಕು. ರಿಮ್ಸ್ ಎಲ್ಲ ಸಿ ಹಾಗೂ ಡಿ ಗ್ರೂಪ್ ಕಾರ್ಮಿಕರಿಗೆ ನಿಗದಿತ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು. ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ, ಜಿಲ್ಲಾಧ್ಯಕ್ಷ ಜಿ.ಅಮರೇಶ, ಜಿ.ಅಡವಿರಾವ್ ಕುಲಕರ್ಣಿ, ಸಿಬ್ಬಂದಿ ಭಾಗ್ಯಮ್ಮ, ಶಶಿಕಲಾ, ಅಕ್ಕನಾಗಮ್ಮ ರಾಕೇಶ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.