ಮಧುಗಿರಿ: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ತೆರಿಯೂರು ಬಳಿ ಮಂಗಳವಾರ ರಾತ್ರಿ (ನ.29 ರಂದು) ಆಟೋ ಪಲ್ಟಿಯಾಗಿ ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿದ್ದು, ಸೂಕ್ತ ಸಮಯದಲ್ಲಿ ಅಂಬ್ಯುಲೆನ್ಸ್ ಹಾಗೂ ವೈದ್ಯರು ಇಲ್ಲದ ಕಾರಣ ಮೃತರ ಕುಟುಂಬ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಘಟನೆ ಹಿನ್ನೆಲೆ: ಮಂಗಳವಾರ ರಾತ್ರಿ ಇಬ್ಬರು ಮಕ್ಕಳು ಸಹಿತ ನಾಲ್ವರು ಆಟೋದಲ್ಲಿ ಆಂಧ್ರಪ್ರದೇಶದ ಹಿಂದೂಪುರದಿಂದ ಕೊಡಿಗೇನಹಳ್ಳಿಗೆ ಬರುವಾಗ ಮಧುಗಿರಿ ತಾಲೂಕಿನ ತೆರಿಯೂರು ಬಳಿ ಬೈಕ್ ಎದುರುಗಡೆ ಬಂದ ಕಾರಣ ಆಟೋ ಪಲ್ಟಿಯಾಗಿದೆ. ಪರಿಣಾಮ ಆಟೋದಲ್ಲಿದ್ದ ಲೀಲಾವತಿ (24) ಗಂಭೀರ ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡ ಲೀಲಾವತಿ ಅವರನ್ನು ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಲೀಲಾವತಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಬೇಕಿತ್ತು. ಆದರೆ ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಅಂಬ್ಯುಲೆನ್ಸ್ ಸಿಗದಿದ್ದರಿಂದ ಸ್ಥಳೀಯರ ಸಹಾಯದಿಂದ ಬೆಂಗಳೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಲೀಲಾವತಿ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಯಲ್ಲಿ ಸೂಕ್ತ ವೈದ್ಯರು ಹಾಗೂ ಅಂಬುಲೆನ್ಸ್ ಇಲ್ಲದ ಕಾರಣಕ್ಕೆ ಈ ಘಟನೆ ನಡೆದಿದೆ ಎಂದು ಆರೋಪಿಸಿ ಮೃತ ಮಹಿಳೆಯ ಸಂಬಂಧಿಕರು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.
ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.