ಬಾಗಲಕೋಟೆ: ಬಿವಿವಿ ಸಂಘದ ದಲಿತ ನೌಕರನ ಮೇಲೆ ದೌರ್ಜನ್ಯ ಎಸಗಿದ ಶಾಸಕ ಡಾ| ವೀರಣ್ಣ ಚರಂತಿಮಠ ಬಂಧಿಸುವಂತೆ ಮತ್ತು ಮುಧೋಳ ತಾಲೂಕಿನ ಶಿರೋಳದ ಜೋಡಿ ಕೊಲೆ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮಳೆಯಲ್ಲೇ ಪ್ರತಿಭಟನೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ಕೆ. ರಾಜೇಂದ್ರ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಡಿಎಸ್‌ಎಸ್ ಸಂಚಾಲಕ ಪರಶುರಾಮ ನೀಲನಾಯಕ, ಬಿವಿವಿ ಸಂಘದ ಬಸವೇಶ್ವರ ಇಂಜನಿಯರಿಂಗ್ ಕಾಲೇಜು ಸರ್ಕಾರದಿಂದ ಅನುದಾನಕ್ಕೆ ಒಳಪಟ್ಟ ದಿನದಿಂದ ಇಲ್ಲಿಯವರೆಗೂ ಪರಿಶಿಷ್ಟ ಜಾತಿಯವರಿಗೆ ಮುಂಬಡ್ತಿ ನಿರಾಕರಿಸಲಾಗಿದೆ. ಮುಂಬಡ್ತಿ ಕೋರಿದ ಸದಾಶಿವ ಕೆಂಭಾವಿ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ನ್ಯಾಯಾಲಯದ ಆದೇಶದಂತೆ ಸದಾಶಿವ ಅವರನ್ನು ಪುನಃ ಸೇವೆಗೆ ಸೇರಿಸಿಕೊಳ್ಳದೇ ದೌರ್ಜನ್ಯ, ಕಿರುಕುಳ ಹಾಗೂ ಅವಮಾನ ಮಾಡಿದ್ದಾರೆ. ಸೇವೆಗೆ ಸೇರಿಸಿಕೊಳ್ಳದೇ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರತಿಬಂಧ ಅಡಿಯಲ್ಲಿ ಶಾಸಕ ಡಾ| ವೀರಣ್ಣ ಚರಂತಿಮಠ, ಚಂದ್ರಶೇಖರ ಶಿವಯೋಗಿಮಠ ಮತ್ತು ರಾಮಚಂದ್ರ ನಾರಾಯಣ ಹೆರಕಲ್ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಆದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತರಿಗೆ ದೌರ್ಜನ್ಯ ಎಸಗುತ್ತಿರುವ ಬಿವಿವಿ ಸಂಘಕ್ಕೆ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಬೇಕು. ಇಂಜನಿಯರಿಂಗ್ ಕಾಲೇಜಿನ ಅವ್ಯವಹಾರ ಕುರಿತಂತೆ ಸೂಕ್ತ ತನಿಖೆ ನಡೆಸಬೇಕು. ಪೊಲೀಸರು ಶಾಸಕ ಡಾ| ವೀರಣ್ಣ ಚರಂತಿಮಠ ಮತ್ತು ಅವರ ಸಂಗಡಿಗರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಶಿರೋಳ ಗ್ರಾಮದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಳಗೇರಿ ಕುಟುಂಬವು ಸಾಕಷ್ಟು ಬಾರಿ ಡಿಎಸ್‌ಪಿ, ಸಿಪಿಐ ಮತ್ತು ಪಿಎಸ್‌ಐ ಅವರಿಗೆ ನಮಗೆ ಜೀವ ಬೆದರಿಕೆ ಇದೆ ಎಂದು ಹೇಳಿಕೊಂಡರೂ ಸಹ ಅಧಿಕಾರಿಗಳು ಬೇಜವಾಬ್ದಾರಿಯಿಂದ ಕರ್ತವ್ಯ ಲೋಪ ಎಸಗಿದ್ದಾರೆ. ಈ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಜಮಖಂಡಿಯ ರಾಯಲ್ ಸ್ಕೂಲ್‌ನಲ್ಲಿ ಅನುಮಾನಸ್ಪದವಾಗಿ ಸಾವಿಗೀಡಾದ ಚಿಮ್ಮಡ ಗ್ರಾಮದ ಪ್ರಿಯಾಂಕ ಪ್ರಕರಣವನ್ನು ಕೂಡಾ ಸಿಐಡಿಗೆ ಒಪ್ಪಿಸಬೇಕು. ಶಾಸಕ ಡಾ| ವೀರಣ್ಣ ಚರಂತಿಮಠ ಅವರನ್ನು ಬಂಧಿಸಬೇಕು. ಇಲ್ಲದಿದ್ದರೆ ನವೆಂಬರ್ 5ರಂದು ಬಾಗಲಕೋಟೆ ಬಂದ್‌ಗೆ ಕರೆ ನೀಡ, ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಡಿಎಸ್‌ಎಸ್‌ನ ಜಿಲ್ಲಾ ಸಂಚಾಲಕ ಶ್ಯಾಮ ಕಾಳೆ, ಸರಸ್ವತಿ ಕಾಂಬಳೆ, ಆರ್ ಪಿಐ ಜಿಲ್ಲಾಧ್ಯಕ್ಷ ಯಮನಪ್ಪ ಗುಣದಾಳ, ಜಿಲ್ಲಾ ಸಂಘಟನಾ ಸಂಚಾಲಕರಾದ ಸತೀಶ ಗಾಡಿ, ಬಸವರಾಜ ಚಲವಾದಿ, ಮುತ್ತಣ್ಣ ಚಲವಾದಿ, ಪ್ರಮುಖರಾದ ಪಡೆಯಪ್ಪ ಕಳ್ಳಿಮನಿ, ಸಿದ್ದು ಮಾದರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.