ವಾಡಿ: ಜನಸಂಖ್ಯೆ ಆಧಾರದಡಿ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಿಸಲು ಹೋರಾಟ ಆರಂಭಗೊಂಡಿದೆ. ಸರ್ಕಾರ ಇದನ್ನು ಲಘುವಾಗಿ ಪರಿಗಣಿಸಿದರೆ ರಾಜ್ಯಾದ್ಯಂತ ಚಳವಳಿ ಭುಗಿಲೇಳಲಿದೆ ಎಂದು ರಾಜ್ಯ ಪರಿಶಿಷ್ಟ ಪಂಗಡಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಹೇಳಿದರು.
ಚಿತ್ತಾಪುರ ತಾಲೂಕಿನ ಚಾಮನೂರ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡುವ ಮೂಲಕ ಮಹರ್ಷಿ ವಾಲ್ಮೀಕಿ ಸಮುದಾಯದ ಜನರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿಯವರಿಗೆ ಶೇ.15ರಿಂದ ಶೇ.17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ ಶೇ.7.5 ರಷ್ಟು ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂಬುದು ಸಮುದಾಯದ ಬೇಡಿಕೆಯಾಗಿದ್ದು, ಇದೇ ಕಾರಣಕ್ಕೆ ಮಹರ್ಷಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರು ಕಳೆದ ಮೂರು ತಿಂಗಳಿಂದ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಶ್ರೀಗಳ ಧರಣಿಯನ್ನು ಹಗುರವಾಗಿ ಪರಿಗಣಿಸುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಬೇಡ ಜನಾಂಗವನ್ನು ನಿರ್ಲಕ್ಷ್ಯದಿಂದ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮುದಾಯದ ಮೀಸಲಾತಿ ಬೇಡಿಕೆ ಈಡೇರಿಸಲು ಪ್ರಾಣ ಕೊಡಲು ಸಿದ್ಧರಾಗಿಯೇ ಹೋರಾಟಕ್ಕೆ ಕರೆ ನೀಡಿದ್ದೇವೆ. ಯಾವುದೇ ಕಾರಣಕ್ಕೂ ಹೋರಾಟ ಕೈ ಬಿಡುವುದಿಲ್ಲ. ಗುರುಗಳ ಆದೇಶದಂತೆ ಶಾಂತಿ ಸಹನೆಯಿಂದ ಶುರುವಾಗಿರುವ ಹೋರಾಟವು ಹಂತ-ಹಂತವಾಗಿ ತನ್ನ ಸ್ವರೂಪ ಬದಲಿಸಲಿದೆ. ಮೇ 20ರಂದು ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಜನರು ಸಾಂಕೇತಿಕವಾಗಿ ಸಂಘಟಿತ ಹೋರಾಟ ನಡೆಸಲಿದ್ದಾರೆ. ನಂತರ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು. ಅಂತಿಮವಾಗಿ ಬೆಂಗಳೂರು ಚಲೋ ರ್ಯಾಲಿ ಮೂಲಕ ರಾಜ್ಯದ ಲಕ್ಷಾಂತರ ಜನರು ವಿಧಾನಸೌಧ ಮುತ್ತಿಗೆ ಹಾಕಿ ಪ್ರತಿಭಟಿಸುವ ಮೂಲಕ ಸರ್ಕಾರವನ್ನು ಎಚ್ಚರಿಸಲಿದ್ದಾರೆ ಎಂದರು.
ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮರಾವ ದೊರೆ ಮಾತನಾಡಿ, ಪಪಂ ಮೀಸಲಾತಿ ಪ್ರಮಾಣ ಹೆಚ್ಚಳದಿಂದ ಉದ್ಯೋಗ ಅವಕಾಶಗಳು ಸೇರಿದಂತೆ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಪ್ರಗತಿ ಕಾಣಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು.
ಪ್ರಭು ಮದಕರಿ, ಮಲ್ಲಿಕಾರ್ಜುನ ಮಾಲಗತ್ತಿ, ಉಪಾಧ್ಯಕ್ಷ ಸುಭಾಷ ರದ್ದೇವಾಡಗಿ, ಮುಖಂಡರಾದ ರಾಮಕೃಷ್ಣ ಮಾಲಗತ್ತಿ, ಸಿದ್ದಪ್ಪ ರದ್ದೇವಾಡಗಿ, ಗಂಗಣ್ಣ ಮಲ್ಲಾರಿ, ಕಾಶೆಪ್ಪ ಇತರರಿದ್ದರು.