ಕಾಳಗಿ: ತಾಲೂಕಿನ ಕೊಡದೂರ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿಕಾರ್ಮಿಕರಿಗೆ ಸಮರ್ಪಕವಾಗಿ ಕೆಲಸ ನೀಡದೇ ಅಧಿಕಾರಿಗಳು ಅನ್ಯಾಯ ಎಸಗಿದ್ದಾರೆ ಎಂದು ಸಿಪಿಐಎಂ ಸಂಘಟನೆ ನೇತೃತ್ವದಲ್ಲಿ ಕೂಲಿಕಾರ್ಮಿಕರು ಕಾಳಗಿ ತಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು.
ಕೊಡದೂರ ಗ್ರಾಪಂದಲ್ಲಿ ಕೂಲಿಕಾರ್ಮಿಕರು ಫಾರಂ ನಂ. 6 ತುಂಬಿ 25 ದಿನ ಕಳೆದರೂ ಕೆಲಸ ನೀಡದೇ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಇದರಿಂದ ಸುಮಾರು 600 ಕೂಲಿಕಾರ್ಮಿಕರು ಕೆಲಸವಿಲ್ಲದೇ ಪ್ರತಿದಿನ ಗ್ರಾಮ ಪಂಚಾಯಿತಿಗೆ ಅಲೆದಾಡುತ್ತಿದ್ದಾರೆ. ಇದಕ್ಕೆಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮತ್ತು ಕಂಪ್ಯೂಟರ್ ಆಪರೇಟರ್ ನೇರ ಕಾರಣರಾಗಿದ್ದು ಇದರಿಂದ ಕೂಲಿಕಾರರ ಬದುಕು ಬೀದಿಗೆ ಬಂದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಮಸ್ಯೆ ಹೇಳಲು ಹೋದ ಕೂಲಿಕಾರ್ಮಿಕರಿಗೆ ಕಂಪ್ಯೂಟರ್ ಆಪರೇಟರ್ ಅನುಚಿತವಾಗಿ ಮಾತನಾಡಿದ್ದಾರೆ ಎಂದು ಸಿಟ್ಟಿಗೆದ್ದ ಕೂಲಿಕಾರ್ಮಿಕರು ತಾಪಂ ಕಚೇರಿಗೆ ಬೀಗ ಜಡಿದು, ಘೋಷಣೆ ಕೂಗಿದರು.
ಪ್ರತಿಭಟನೆ ಉದ್ದೇಶಿಸಿ ಸಿಪಿಐಎಂ ಮುಖಂಡ ಗುರುನಂದೇಶ ಕೋಣಿನ ಮಾತನಾಡಿ, ಕೂಲಿಕಾರ್ಮಿಕರಿಗೆ ಸಮರ್ಪಕ ಉದ್ಯೋಗ ಖಾತ್ರಿ ಕೆಲಸ ನೀಡದೇ ಅವರ ಜೀವನದೊಂದಿಗೆ ಚೆಲ್ಲಾಟ ಆಡುತ್ತಿರುವ ಕೊಡದೂರ ಪಿಡಿಒ ಮತ್ತು ಕಂಪ್ಯೂಟರ್ ಆಪರೇಟರ್‌ನ್ನು ಕೂಡಲೆ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ನಿಗದಿ ಮಾಡಿರುವಂತೆ ಪ್ರತಿವರ್ಷ 150ದಿನಗಳ ಕೆಲಸ ನೀಡಬೇಕು. ಮಾಡಿದ ಕೆಲಸಕ್ಕೆ ಕೂಡಲೇ ವೇತನ ಪಾವತಿಸಬೇಕು. ಮೇಸ್ತ್ರಿಗಳ ಗೌರವ ಭತ್ಯೆ ನೀಡಬೇಕೆಂದು ಆಗ್ರಹಿದರು.
ಸಿಪಿಐಎಂ ಸದಸ್ಯ ದಿಲೀಪ ನಾಗೂರ, ಕಾಶಿನಾಥ ಬಂಡಿ, ಕೂಲಿಕಾರ್ಮಿಕರಾದ ಹನೀಫಾ, ಕಸ್ತೂರಿಬಾಯಿ, ವಿಜಯಲಕ್ಷ್ಮೀ, ಅನಸೂಬಾಯಿ, ಗುರುಬಾಯಿ, ಸಿದ್ಧು ಕೊಡದೂರ, ಸಾಯಬಣ್ಣ ಕೊಡದೂರ ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.