Advertisement

ಸ್ಥಳೀಯ ವಾಹನಗಳಿಗೆ ಸುಂಕ: ಸಾಸ್ತಾನದಲ್ಲಿ ಅಹೋರಾತ್ರಿ ಪ್ರತಿಭಟನೆ

09:35 AM Nov 27, 2018 | Team Udayavani |

ಕೋಟ: ಸಾಸ್ತಾನ ಟೋಲ್‌ಗೇಟ್‌ನಲ್ಲಿ ಸೋಮವಾರ ಬೆಳಗ್ಗೆ ಪ್ರತಿಭಟನೆ ನಡೆಸಿದವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಬ್ರಹ್ಮಾವರದ ಧರ್ಮಾವರಂ ಸಭಾಂಗಣದಲ್ಲಿರಿಸಿದರು. ಸಂಜೆ ವೇಳೆಗೆ ಡಿವೈಎಸ್‌ಪಿ. ಜೈಶಂಕರ್‌ ಹಾಗೂ ಪೊಲೀಸ್‌ ಉನ್ನತ ಅಧಿಕಾರಿಗಳು ಆಗಮಿಸಿ ಸ್ಥಳದಿಂದ ತೆರಳುವಂತೆ ಸೂಚಿಸಿದರೂ ಪ್ರತಿಭಟನಕಾರರು “ನಮ್ಮನ್ನು  ಯಾವ ಕಾರಣಕ್ಕೆ ಬಂಧಿಸಿದ್ದೀರಿ ಎಂದು’ ತಿಳಿಸುವ ತನಕ ಇಲ್ಲಿಂದ ತೆರಳುವುದಿಲ್ಲ ಹಾಗೂ ಸ್ಥಳೀಯರಿಗೆ ವಿನಾಯಿತಿ ಭರವಸೆ ಸಿಗುವ ತನಕ ಹೋರಾಟ ಅಂತ್ಯಗೊಳಿಸುವುದಿಲ್ಲ ಎಂದು ಪ್ರತಿಭಟನೆಯನ್ನು ಮುಂದುವರಿಸಿದರು.

Advertisement

ಬೆಳಗ್ಗೆ 200ಕ್ಕೂ ಹೆಚ್ಚು ಪೊಲೀಸ್‌ ಭದ್ರತೆಯಲ್ಲಿ ಬೆಳಗ್ಗೆ ಸ್ಥಳೀಯರಿಂದ ಶುಲ್ಕ ಸಂಗ್ರಹ ಆರಂಭಿಸಲಾಯಿತು. ಈ ಸಂದರ್ಭ ಗುಂಪಾಗಿ ಟೋಲ್‌ಗೇಟ್‌ ಕಡೆಗೆ ಆಗಮಿಸಿದ ಹೋರಾಟಗಾರರನ್ನು ಪೊಲೀಸರು ತಡೆದರು. ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸಬೇಕು ಎಂದು ಹೋರಾಟಗಾರರು ಪಟ್ಟು ಹಿಡಿದು ಕುಳಿತರು. 

ಡಿಸಿ ವಿರುದ್ಧ ಆಕ್ರೋಶ
ಉಸ್ತುವಾರಿ ಸಚಿವರು ಸಭೆ ನಡೆಸಲು ದಿನಾಂಕ ನಿಗದಿಪಡಿಸಿದ ಮೇಲೂ ಟೋಲ್‌ ಸಂಗ್ರಹಿಸಲು ಅವಕಾಶ ನೀಡಿರುವ ಜಿಲ್ಲಾಧಿಕಾರಿ ವಿರುದ್ಧ ಹೋರಾಟಗಾರರು ಧಿಕ್ಕಾರ ಕೂಗಿದರು. ಶಾಂತಿಯುತ ಪ್ರತಿಭಟನೆಯ ಉದ್ದೇಶ
ದಿಂದ ಟೋಲ್‌ಗೇಟ್‌ ಸಮೀಪಕ್ಕೆ ಶಾಂತಿಯುತವಾಗಿ ನಡೆದುಹೋಗುತ್ತಿದ್ದ ನಮ್ಮನ್ನು ಅಡ್ಡಗಟ್ಟಿ ಬಂಧಿಸಿದ್ದಾರೆ. ವೃತ್ತ ನಿರೀಕ್ಷಕ ಶ್ರೀಕಾಂತ್‌ ಟೋಲ್‌ನವರ ಪರ ವರ್ತಿಸಿದ್ದಾರೆ ಎಂದು ಜಾಗೃತಿ ಸಮಿತಿಯ ಅಧ್ಯಕ್ಷ ಪ್ರತಾಪ್‌ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಶ್ರೀನಿವಾಸ ಪೂಜಾರಿ ಭೇಟಿ
ವಿಧಾನಪರಿಷತ್‌ ವಿಪಕ್ಷ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ  ಹೋರಾಟಗಾರರೊಂದಿಗೆ ಚರ್ಚೆ ನಡೆಸಿದರು. ಅನಂತರ  ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಮತ್ತು ಉಡುಪಿ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರ ಜತೆಗೆ ಮಾತನಾಡಿ ನ. 28ರ ತನಕ ಶುಲ್ಕ ಸಂಗ್ರಹವನ್ನು ಮುಂದೂಡುವಂತೆ ಮನವಿ ಮಾಡಿದರು. ಆದರೆ ಉನ್ನತ ಅಧಿಕಾರಿಗಳಿಂದ ಆದೇಶ ಬಂದಲ್ಲಿ ಮೂಂದೂಡಬಹುದು ಎಂದು ಅವರು ತಿಳಿಸಿದಾಗ ಹೆದ್ದಾರಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಕೃಷ್ಣ ರೆಡ್ಡಿಯವರೊಂದಿಗೆ ಚರ್ಚಿಸಿ ರಿಯಾಯಿತಿ ನೀಡುವಂತೆ ಮತ್ತು ನ. 28ರಂದು ಸಭೆ ನಡೆಸುವಂತೆ ಕೋರಿದರು.

ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮೇಲುಸ್ತುವಾರಿ ನೋಡಿಕೊಳ್ಳುವ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೃಷ್ಣ ರೆಡ್ಡಿಯವರು ಕನಿಷ್ಠ 10 ಕಿ.ಮೀ. ವ್ಯಾಪ್ತಿಯ ಪ್ರದೇಶದ ವಾಹನ ಮಾಲಕರಿಗೆ ರಿಯಾಯಿತಿ ಕೊಡುವ ಭರವಸೆ ನೀಡಿದ್ದರೂ ಜಿಲ್ಲೆಯಲ್ಲಿ ಟೋಲ್‌ಗೇಟ್‌ ಬಗ್ಗೆ ಸರಕಾರಕ್ಕೆ ನಿಯಂತ್ರಣವಿಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದರು.

Advertisement

ರಾ.ಹೆ. ಹೆದ್ದಾರಿ ಸಮಸ್ಯೆ:ನಾಳಿನ ಸಭೆ ಮುಂದಕ್ಕೆ
ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಸಮಸ್ಯೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನ. 28ರಂದು ಕರೆಯಲಾಗಿದ್ದ ಸಭೆಯನ್ನು ಮುಂದೂಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next