ಮಂಡ್ಯ: ಜೂನ್ ತಿಂಗಳಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ 9.19 ಟಿಎಂಸಿ ಕಾವೇರಿ ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶ ನೀಡಿರುವುದನ್ನು ಖಂಡಿಸಿ ಮಂಡ್ಯ ಜಿಲ್ಲೆಯ ವಿವಿಧೆಡೆ ಪ್ರತಿಭಟನೆಗಳು ನಡೆದಿವೆ. ಶ್ರೀರಂಗಪಟ್ಟಣದಲ್ಲಿ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಮೈಸೂರು-ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪ್ರಾಧಿಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪಾಂಡವಪುರದಲ್ಲಿ ಪಟ್ಟಣದ ಐದು ದೀಪ ವೃತ್ತದಲ್ಲಿ ತಾಲೂಕು ರೈತಸಂಘದ ಕಾರ್ಯಕರ್ತರಿಂದ ಹೆದ್ದಾರಿ ತಡೆ ನಡೆಸಲಾಯಿತು. ಇದೇ ವೇಳೆ, ಜಿಲ್ಲೆಯ ಇತರೆಡೆಯೂ ಪ್ರತಿಭಟನೆಗಳು ನಡೆದ ಬಗ್ಗೆ ವರದಿಯಾಗಿದೆ. ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ. ಪ್ರಾಧಿಕಾರದ ಆದೇಶದ ಬಗ್ಗೆ ರಾಜ್ಯ ನಾಯಕರು ನೀಡಿದ ಪ್ರತಿಕ್ರಿಯೆ ಇಲ್ಲಿದೆ.
ಸದ್ಯದ ಪರಿಸ್ಥಿತಿಯಲ್ಲಿ ಕೆ.ಆರ್.ಎಸ್‌ನಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ.
ನೀರಿಲ್ಲದ ಕಾರಣ ಕೃಷ್ಣರಾಜ ಸಾಗರ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಯಾವುದೇ ಬೆಳೆ
ಬೆಳೆಯಬಾರದೆಂದು ಈಗಾಗಲೇ ರೈತರಿಗೆ ಸರ್ಕಾರ ಆದೇಶ ಹೊರಡಿಸಿದೆ. ಅಂತಹುದರಲ್ಲಿ ತಮಿಳುನಾಡಿಗೆ ನೀರು ಕೊಡುವುದಾದರೂ ಹೇಗೆ?.
– ಜಿ.ಮಾದೇಗೌಡ, ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ.