ಗುರುಮಠಕಲ್: ಕನ್ನಡ ನಾಡಧ್ವಜ ಸುಟ್ಟು ಹಾಕಿ ಅವಮಾನ ಮಾಡಿದ ಘಟನೆ ಖಂಡಿಸಿ ತಾಲೂಕು ಗರುಡ ಸೇವಾ ಸಂಸ್ಥೆ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಸಿಹಿ ನೀರು ಬಾವಿಯಿಂದ ಗಂಗಾಪರಮೇಶ್ವರಿ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಬಸವೇಶ್ವರ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಶರಣಬಸವ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಉತ್ತರ ಕರ್ನಾಟಕ ಅಧ್ಯಕ್ಷ ರವಿ ಬಾರನೋಳ್ ಮಾತನಾಡಿ, ಬೆಳಗಾವಿಯಲ್ಲಿ ಮಹಾರಾಷ್ಟ್ರದ ಶಿವಸೇನೆ ಸಂಘಟನೆಯವರು ನಮ್ಮ ನಾಡಧ್ವಜ ಸುಟ್ಟು ಹಾಕಿ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ದರ್ಪ ತೋರಿದ್ದಾರೆ. ಕೂಡಲೇ ದುಷ್ಕೃತ್ಯ ಎಸಗಿದ ಕಿಡಿಗೇಡಿಗಳನ್ನು ದೇಶದಿಂದ ಗಡಿಪಾರು ಮಾಡಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಬೆಳಗಾವಿಯಲ್ಲಿ ಚಳಿಗಾಲದ ವಿಧಾನ ಮಂಡಲ ಅಧಿವೇಶನ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಶಿವಸೇನೆ ಸಂಘಟನೆಯಿಂದ ಮತ್ತು ಮಹಾರಾಷ್ಟ್ರ ಜನರಿಂದ ಇಂತಹ ಕೃತ್ಯ ನಡೆಯುತ್ತಿರುವುದು ವಿಷಾದಕರ. ನಾಡಿನ ರಕ್ಷಣೆಗಾಗಿ ಮುಖ್ಯಮಂತ್ರಿಗಳು ಕಠಿಣ ಕ್ರಮ ತೆಗೆದುಕೊಳ್ಳುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.
ಈ ವೇಳೆ ವಿನಾಯಕರಾವ್, ರವಿ ಪೋತೋಲ್, ಗೋಪಾಲಕೃಷ್ಣ ಮೇದಾ, ಜಗದೀಶ ರಾಮಪೂರ್, ಪ್ರವೀಣ ಜೋಶಿ, ಮಹಾದೇವ ಎಂ, ಟಿ. ಪಲ್ಲಿ, ಚನ್ನಪ್ಪ ಕಾಕಲವಾರ, ಚನ್ನಯ್ಯ ಪಡಿಗೆ, ನಾರಾಯಣ ಮಜ್ಜಿಗಿ ಸೇರಿದಂತೆ ಇತರರಿದ್ದರು.