ಅಣ್ಣಿಗೇರಿ: ಸಾಸ್ವಿಹಳ್ಳಿ ಹಾಗೂ ಕೊಂಡಿಕೊಪ್ಪ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಹಾಗೂ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸಾಸ್ವಿಹಳ್ಳಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಕೊಂಡಿಕೊಪ್ಪ ಗ್ರಾಮದ ಬಡವರಿಗೆ ಆಶ್ರಯ ಮನೆ ವಿತರಣೆಯಲ್ಲಿ ವಿಳಂಬ ಹಾಗೂ ಅಂಬೇಡ್ಕರ್ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸಲು ವಿಳಂಬ ಮಾಡುತ್ತಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು.
ಈಗಾಗಲೇ ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧವಾಗಿದ್ದರೂ ಮನೆ ಹಾಗೂ ಹಕ್ಕುಪತ್ರಗಳ ವಿತರಣೆಯಲ್ಲಿ ವಿಳಂಬ ಮಾಡಲಾಗುತ್ತಿದೆ. ಅಂಬೇಡ್ಕರ್ ಕಾಲೋನಿಯಲ್ಲಿ ಕುಡಿಯುವ ನೀರು ಹಾಗೂ ಚರಂಡಿ ವ್ಯವಸ್ಥೆ ಇಲ್ಲ. ಸರಿಯಾದ ವಿದ್ಯುತ್ ದೀಪಗಳಿಲ್ಲ ಹಾಗೂ ಇತರೆ ಮೂಲಭೂತ ಸೌಕರ್ಯ ಒದಗಿಸುತ್ತಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಮುಖಂಡರಾದ ಹನುಮಂತಪ್ಪ ಮುಂದಿನಮನಿ ಆರೋಪಿಸಿದರು.
2016ರಲ್ಲಿ ಸಾಸ್ವಿಹಳ್ಳಿ ಗ್ರಾಪಂ ಕೊಂಡಿಕೊಪ್ಪದ ಅಣ್ಣಪ್ಪ ಉಪ್ಪಿನವರ 1.23 ಎಕರೆ ಜಮೀನು ಖರೀದಿಸಿ ಆಶ್ರಯ ಮನೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು. ಮೊನ್ನೆ ನಡೆದ ಗ್ರಾಮಸಭೆಯಲ್ಲಿ ಫಲಾನುಭವಿಗಳ ಆಯ್ಕೆಯೂ ನಡೆದಿತ್ತು ಆದರೆ ಫಲಾನುಭವಿಗಳಿಗೆ ಮನೆ ವಿತರಿಸುವ ಮುನ್ನವೇ ಹಿಂದಿನ ಆಡಳಿತ ಮಂಡಳಿ ನಿರ್ಗಮಿಸಿತು. ಇಂದಿನ ಆಡಳಿತ ಮಂಡಳಿಯವರು ಇನ್ನೂವರೆಗೆ ಮನೆ ವಿತರಿಸಿಲ್ಲ ಎಂದು ಆರೋಪಿಸಿದರು.
ಸ್ಥಳಕ್ಕೆ ಅಣ್ಣಿಗೇರಿ ತಹಶೀಲ್ದಾರ್ ಕೊಟ್ರೇಶ್ ಗಾಳಿ ಆಗಮಿಸಿ ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ತಾಪಂ ಸಹಾಯಕ ನಿರ್ದೇಶಕರಾದ ಹಕಾರಿ ಮೇಡಂ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಕಫೀಲಾ ಯಲವಗಿ, ಉಪ ತಹಶೀಲ್ದಾರ್ ಸಂತೋಷ್ ಅಸ್ಕಿ, ಮೀನಾಕ್ಷಿ ಭಜಂತ್ರಿ, ಆರಕ್ಷಕ ಠಾಣೆ ಅಧಿಕಾರಿಗಳಾದ ಪಾಟೀಲ್ ಹಾಗೂ ನಿಂಗಪ್ಪ ತಳಗೇರಿ ಇದ್ದರು.