Advertisement

ಪೊಲೀಸ್‌ ಠಾಣೆ ಎದುರು ಶವ ಇಟ್ಟು ಪ್ರತಿಭಟನೆ

02:56 PM Nov 14, 2022 | Team Udayavani |

ಹುಬ್ಬಳ್ಳಿ: ಸಂತೋಷ ಮುರಗೋಡನನ್ನು ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಮೃತನ ಕುಟುಂಬಸ್ಥರು, ಸ್ನೇಹಿತರು ರವಿವಾರ ಕಸಬಾಪೇಟೆ ಪೊಲೀಸ್‌ ಠಾಣೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು.

Advertisement

ಕೊಲೆಗೈದಿರುವ ಶಿವ್ಯಾ ಕಳ್ಳತನ ಸೇರಿದಂತೆ ಇನ್ನಿತರೆ ಕೃತ್ಯ ಎಸಗುತ್ತಿದ್ದ. ಈ ಬಗ್ಗೆ ಸಂತೋಷ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರೂ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿರಲಿಲ್ಲ. ಮೊದಲೇ ಅವನ ವಿರುದ್ಧ ಕ್ರಮ ತೆಗೆದುಕೊಂಡಿದ್ದರೆ ಸಂತೋಷನ ಕೊಲೆ ಆಗುತ್ತಿರಲಿಲ್ಲ. ಇದಕ್ಕೆಲ್ಲ ಪೊಲೀಸರೇ ಕಾರಣ. ಶಿವ್ಯಾಗೆ ಅವರ ಕುಮ್ಮಕ್ಕಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಂತೋಷ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರಲಿಲ್ಲ. ಈಗಲಾದರೂ ಪೊಲೀಸರು ಕೊಲೆಗಡುಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಠಾಣೆ ಬಳಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೊಲೆಯಾದ ಸಂತೋಷಗೆ ಒಂದು ತಿಂಗಳ ಹೆಣ್ಣು ಮಗುವಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಭೇಟಿ ನೀಡಿ, ಕ್ರಿಮಿನಲ್‌ ಪ್ರಕರಣ ಇರುವ ಶಿವ್ಯಾ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇದಕ್ಕೆ ಪೊಲೀಸರೇ ನೇರ ಹೊಣೆ. ನಿರ್ಲಕ್ಷ್ಯ ವಹಿಸಿದ ಪೊಲೀಸರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು. ಕ್ಷುಲ್ಲಕ ವಿಷಯವಾಗಿ ಶನಿವಾರ ರಾತ್ರಿ ಹಳೇಹುಬ್ಬಳ್ಳಿ ಹೊರ ಠಾಣೆ ಬಳಿ ಸಂತೋಷ ಮುರಗೋಡನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ, ಕಸಬಾಪೇಟೆ ಪೊಲೀಸರು ಜಂಗ್ಲಿಪೇಟೆ ವಡ್ಡರ ಓಣಿಯ ಸಂಜಯ ಊರ್ಫ್‌ ಶಿವ್ಯಾ ನರೋಟಿಯನ್ನು ರವಿವಾರ ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next