Advertisement

ನಗರಸಭೆ ಕಚೇರಿ ಎದುರು ನಿರಶನ

02:41 PM Jun 04, 2022 | Team Udayavani |

ರಾಯಚೂರು: ಅಶುದ್ಧ ನೀರು ಪೂರೈಕೆಯಿಂದ ನಗರದಲ್ಲಿ ವಾಂತಿ ಭೇದಿ ಪ್ರಕರಣಗಳು ಹೆಚ್ಚಾಗುತ್ತಿವೆ. ಕೂಡಲೇ ಶುದ್ಧು ಕುಡಿವ ನೀರು ಪೂರೈಕೆಗೆ ಕ್ರಮ ವಹಿಸಬೇಕು ಎಂದು ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯೂನಿಸ್ಟ್‌ ) ಕಾರ್ಯಕರ್ತರು ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಈ ಕುರಿತು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ, ಅಶುದ್ಧ ನೀರು ಸೇವಿಸಿ ಸಾವಿರಾರು ಜನ ಅಸ್ವಸ್ಥರಾಗಿದ್ದು, ಓರ್ವ ಮಹಿಳೆ ಮೃತಪಟ್ಟಿದ್ದಾರೆ. ನಗರದ ವಿವಿಧ ಆಸ್ಪತ್ರೆಗಳಲ್ಲಿ ನೂರಾರು ಜನರು ದಾಖಲಾಗಿದ್ದು ತೀವ್ರ ಆಘಾತ ಹಾಗೂ ಆತಂಕದ ಸಂಗತಿಯಾಗಿದೆ. ನಗರದಲ್ಲಿ ಸರಬರಾಜಾಗುತ್ತಿರುವ ನೀರು ರಾಸಾಯನಿಕ ಮಿಶ್ರಿತ, ವಿಪರೀತ ವಾಂತಿಭೇದಿಗೆ ಕಾರಣವಾಗುವ ರೋಗಾಣು ಜೀವಿಗಳಿಂದ ಕೂಡಿದೆ. ಈ ವಿಚಾರದಲ್ಲಿ ನಗರಸಭೆ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ರಾಂಪೂರ, ಚಿಕ್ಕಸುಗೂರು ಶುದ್ಧೀಕರಣ ಘಟಕಗಳಲ್ಲಿ ನೀರಿನ ಶುದ್ಧೀಕರಣವೇ ಸ್ಥಗಿತವಾಗಿದೆ. ನೀರಿನ ಶುದ್ಧತೆ ಪರೀಕ್ಷಿಸಲು ತಜ್ಞರೇ ಇಲ್ಲದಿರುವುದು ನಗರಸಭೆ ಆಡಳಿತಕ್ಕೆ ಹಿಡಿದ ಕೈಗನ್ನಡಿ. ನಗರದ ಎಲ್ಲ ಆಸ್ಪತ್ರೆಗಳಲ್ಲಿ ವಾಂತಿ ಭೇದಿಗಳಿಂದ ದಾಖಲಾಗುವ ಎಲ್ಲಾ ಪ್ರಕರಣಗಳ ಖರ್ಚು ವೆಚ್ಚವನ್ನು ನಗರಸಭೆ ಹಾಗೂ ಜಿಲ್ಲಾಡಳಿತವೇ ಭರಿಸಬೇಕು. ವಾಂತಿಭೇದಿಯಿಂದ ಮೃತಪಟ್ಟ ಹಾಗೂ ಬಾಧಿತ ಕುಟುಂಬಗಳಿಗೆ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಡಾ| ಚಂದ್ರಗಿರೀಶ, ಮುಖಂಡರಾದ ಅಣ್ಣಪ್ಪ, ಮಹೇಶ ಚೀಕಲಪರ್ವಿ, ಚನ್ನಬಸವ ಜಾನೇಕಲ್‌, ಕಾರ್ತಿಕ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next