ಬಳ್ಳಾರಿ: ನಗರದ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕ್ರೀಡಾ ಮೈದಾನವನ್ನು ಖಾಸಗಿಯವರಿಗೆ ನೀಡುವುದನ್ನು ವಿರೋ ಧಿಸಿ ನಗರದ ವಿಮ್ಸ್ ನಿರ್ದೇಶಕರ ಕಚೇರಿ ಎದುರು ವಿಮ್ಸ್ ಮೈದಾನ ಉಳಿಸಿ ಹೋರಾಟ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ವಿಮ್ಸ್ ಮೈದಾನದನ್ನು ಅಭಿವೃದ್ಧಿಪಡಿಸಲು ಖಾಸಗಿ ಸಂಸ್ಥೆಗೆ ನೀಡಿರುವುದನ್ನು ವಿರೋಧಿ ಸಿದ್ದ ಸಮಿತಿಯ ಮುಖಂಡರು ವಿಮ್ಸ್ ಆಡಳಿತದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಮೈದಾನವನ್ನು ಖಾಸಗಿಯವರಿಂದ ವಾಪಸ್ ಪಡೆದು ವಿಮ್ಸ್ ಸುಪರ್ದಿಗೆ ಪಡೆದುಕೊಂಡು ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಬೇಕು ಎಂದವರು ಒತ್ತಾಯಿಸಿದರು.
ವಿಮ್ಸ್ ಗವರ್ನಿಂಗ್ ಕೌನ್ಸಿಲ್ ಮೀಟಿಂಗ್ ನಲ್ಲಿ ಮೈದಾನವನ್ನು ಖಾಸಗಿಯವರಿಗೆ ನೀಡುವ ಕುರಿತು ಯಾವುದೇ ಚರ್ಚೆ ನಡೆಯದಿದ್ದರೂ, ಮೈದಾನದಲ್ಲಿ ಕೆಲಸ ಮಾಡಲು ಅವರಿಗೆ ಅವಕಾಶ ಹೇಗೆ ನೀಡಿದ್ದೀರಿ ಎಂದು ಸ್ಥಳಕ್ಕೆ ಆಗಮಿಸಿದ್ದ ವಿಮ್ಸ್ ನಿರ್ದೇಶಕ ಗಂಗಾಧರ ಗೌಡರನ್ನು ಪ್ರತಿಭಟನಾನಿರತರು ಪ್ರಶ್ನಿಸಿದರು. ಕೂಡಲೇ ಮೈದಾನದಲ್ಲಿ ಹಾಕಲಾಗಿರುವ ಸಾಮಗ್ರಿಗಳನ್ನು ಮತ್ತು ಅವರು ಅಳವಡಿಸಿರುವ ಸಿಸಿ ಕ್ಯಾಮೆರಾಗಳನ್ನು ತೆರೆವುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದ ವಿಮ್ಸ್ ನಿರ್ದೇಶಕ ಗಂಗಾಧರ ಗೌಡ, ಈ ಕೂಡಲೇ ಮೈದಾನದಲ್ಲಿ ಸಾಮಗ್ರಿಗಳನ್ನು ತೆರವುಗೊಳಿಸಲು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ಎಂ. ಹನುಮ ಕಿಶೋರ್, ಕೆ. ಎರ್ರಿಸ್ವಾಮಿ, ಮುರಳಿ, ಕೃಷ್ಣ, ಆದಿಮೂರ್ತಿ, ಗಾದಿಲಿಂಗಪ್ಪ, ರಾಮು, ಚಂದ್ರಶೇಖರ್, ಗಂಗಣ್ಣ, ಗೋಪಾಲ್, ಶ್ರೀನಿವಾಸ್, ವೆಂಕಟೇಶ್, ಪ್ರಸಾದ್, ನಾಗರಾಜ್, ಕಿಶೋರ್, ರಂಗಸ್ವಾಮಿ, ಪಂಪಾಪತಿ, ಹೊನ್ನೂರಪ್ಪ, ನೀಲಕಂಠ, ಲಿಂಗಣ್ಣ ಸೇರಿದಂತೆ ಹಲವರು ಇದ್ದರು.