ವಿಜಯಪುರ: ಬಬಲೇಶ್ವರ ತಾಲೂಕಿನ ಕಣಮುಚನಾಳ ಗ್ರಾಮದಲ್ಲಿ ಕಳಪೆ ಕಾಮಗಾರಿಯಿಂದಾಗಿ ಕಾಲುವೆ ನೀರು ರೈತರ ಜಮೀನಿಗೆ ನುಗ್ಗಿ, ಅಪಾರ ಬೆಳೆ ಹಾನಿ ಉಂಟಾಗಿದೆ. ಕೂಡಲೇ ಸರ್ಕಾರ ನಷ್ಟಕ್ಕೀಡಾದ ರೈತರಿಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಕೆಬಿಜೆಎನ್ನೆಲ್ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಬಾಧಿತ ರೈತ ಎಚ್ಚರಿಸಿದ್ದಾನೆ.
ಈ ಕುರಿತು ಪ್ರಕಟಣೆ ನೀಡಿರುವ ಬಾಧಿ ತ ರೈತ ಸದಾಶಿವ ಬರಟಗಿ, ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ಕಾಲುವೆ ಕಣಮುಚನಾಳ ಗ್ರಾಮದ ಸರ್ವೇ ನಂ. 20/ಗಿ/ಗಿಕ್ಷೇತ್ರ 13 ಎಕರೆ 17 ಗುಂಟೆ ಜಮೀನಿಲ್ಲಿ ಕಾಲುವೆ ಹಾಯ್ದಿದ್ದು, ಸದರಿ ಜಮೀನಿನಲ್ಲಿ ಕಾಲುವೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಆದರೂ ಸದರಿ ಕಾಲುವೆಗೆ ನೀರು ಹರಿಸಿದ್ದು, ಇದರಿಂದ ರೈತರ ಜಮೀನಿಗೆ ನುಗ್ಗಿದ ನೀರು ಅಪಾರ ಪ್ರಮಾಣದ ಬೆಳೆ ಹಾನಿ ಉಂಟು ಮಾಡಿದ್ದು, ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.
2018ರಲ್ಲಿ ಕಾಲುವೆ ನಿರ್ಮಾಣಕ್ಕೆ ಗುತ್ತಿಗೆ ಪಡೆದ ಗುತ್ತಿಗೆದಾರ ಅಥವಾ ಜಲ ಸಂಪನ್ಮೂಲ ಇಲಾಖೆ ಯಾವುದೇ ಮಾಹಿತಿ, ನೋಟಿಸ್ ನೀಡದೇ ನನ್ನ ಜಮೀನಿನಲ್ಲಿ ಬೆಳೆದಿದ್ದ ಬಿಳಿ ಜೋಳದ ಬೆಳೆ ಹಾಳು ಮಾಡಿ, ನನ್ನ ತಕರಾನ ಮಧ್ಯೆಯೂ ದೌರ್ಜನ್ಯದಿಂದ ಕಾಲುವೆ ನಿರ್ಮಾಣಕ್ಕೆ ಮುಂದಾಗಿ, ಅರ್ಧಕ್ಕೆ ನಿಲ್ಲಿಸಿದ್ದಾರೆ. ಕಾಮಗಾರಿ ಅರ್ಧಕ್ಕೆ ನಿಂತಿರುವ ಕಾಲುವೆಗೆ ಹೆಚ್ಚಿನ ಪ್ರಮಾಣದ ನೀರು ಹರಿಸಿದ್ದರಿಂದ ನನ್ನ ಜಮೀನಿಗೆ ನೀರು ನುಗ್ಗಿ ಎಲ್ಲ ಬೆಳೆ ಹಾನಿಯಾಗಿ, ನನಗೆ ಆರ್ಥಿಕವಾಗಿ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ದೂರಿದರು. ಕಾಲುವೆ ನೀರಿನ ರಭಸಕ್ಕೆ ಬೆಳೆ ಮಾತ್ರವಲ್ಲ ಜಮಿನಿನಲ್ಲಿ ಫಲವತ್ತಾದ ಮಣ್ಣು ಕೂಡ ಕೊಚ್ಚಕೊಂಡು ಹೋಗಿದೆ. ನಿರಂತರ ಹಾನಿ ಕಾರಣ ಜಲ ಸಂಪನ್ಮೂಲ ಇಲಾಖೆ ಮಾತ್ರವಲ್ಲ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರರಿಗೂ ಮೌಖೀಕವಾಗಿ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿಲ್ಲ. ಇದರಿಂದ ಭಾರಿ ನಷ್ಟದ ಜೊತೆಗೆ ಮಾನಸಿಕವಾಗಿ ಆಘಾತ ಉಂಟು ಮಾಡಿದೆ ಎಂದು ಬಾಧಿತ ರೈತ ಸದಾಶಿವ ಭರಟಗಿ ಅಳಲು ತೋಡಿಕೊಂಡಿದ್ದಾರೆ.
ಪದೇ ಪದೇ ನಷ್ಟ ಉಂಟಾಗುತ್ತಿರುವ ಕುರಿತು ಜಿಲ್ಲಾಡಳಿತಕ್ಕೆ ಈ ಹಿಂದೆ ಕೂಡ ಮನವಿ ಸಲ್ಲಿಸಿದ್ದು, ಸ್ಪಂದಿಲ್ಲ. ಕೆಬಿಜೆಎನ್ನೆಲ್ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದ ಕಾರಣದಿಂದ ಮತ್ತೂಮ್ಮೆ ಭಾರಿ ಪ್ರಮಾಣದಲ್ಲಿ ಆರ್ಥಿಕ ನಷ್ಟವಾಗಿದೆ. ಕೂಡಲೇ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಅಭಿಯಂತರರ ಕಚೇರಿ ಎದುರಿಗೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆಂದು ಎಚ್ಚರಿಕೆ ನೀಡಿದದ್ದಾರೆ.