ದಾವಣಗೆರೆ: ರಾಜ್ಯ ಸರ್ಕಾರ ಅ.1 ರೊಳಗೆ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ-2 ಎ ಮೀಸಲಾತಿ ಸೌಲಭ್ಯ ಒದಗಿಸುವ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದಲ್ಲಿ ಅಂದಿನಿಂದಲೇ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮತ್ತೆ ಹೋರಾಟ ಪ್ರಾರಂಭಿಸಲಾಗುವುದು ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 1 ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್‌ರವರ ಜನ್ಮದಿನದ ಜೊತೆಗೆ ಸಮಾಜ ಬಾಂಧವರ ಸಭೆ ನಡೆಯಲಿದೆ. ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ-2 ಎ ಮೀಸಲಾತಿ ಸೌಲಭ್ಯ ಒದಗಿಸುವ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದಲ್ಲಿ ಭಾರತೀಯ ವಿದ್ಯಾಭವನದಿಂದ ನೇರವಾಗಿ ಫ್ರೀಡಂ ಪಾರ್ಕ್‌ಗೆ ತೆರಳಿ ಮತ್ತೆ ಧರಣಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಮೀಸಲಾತಿ ಹೋರಾಟವನ್ನು ಮುಂದುವರೆಸುವುದೋ ಇಲ್ಲವೇ ಸರ್ಕಾರ ತನ್ನ ಸ್ಪಷ್ಟ ನಿರ್ಧಾರ ತಿಳಿಸಿದರೆ ಮುಖ್ಯಮಂತ್ರಿಯಾದಿಯಾಗಿ ಸರ್ಕಾರವನ್ನು ಅಭಿನಂದಿಸುವುದೋ ಎಂಬುದರ ಬಗ್ಗೆಯೂ ಚರ್ಚೆ ನಡೆಸಲಾಗುವುದು. ಸಭೆಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರೇ ಆಗಮಿಸಿ ಸರ್ಕಾರದ ಸ್ಪಷ್ಟ ನಿರ್ಧಾರ ಪ್ರಕಟಿಸಲಿ, ಇಲ್ಲವೇ ಸರ್ಕಾರದ ಪ್ರತಿನಿಧಿಯ ಮೂಲಕವಾದರೂ ತಿಳಿಸಲಿ. ಶುಕ್ರವಾರದ ಮಧ್ಯಾಹ್ನದ ವೇಳೆಗೆ ಸರ್ಕಾರ ಸ್ಪಷ್ಟ ನಿರ್ಧಾರವನ್ನು ತಿಳಿಸಲೇಬೇಕು. ಇಲ್ಲದಿದಲ್ಲಿ ಮತ್ತೆ ಧರಣಿ ನಡೆಸಲಾಗುವುದು ಎಂದು ಶ್ರೀಗಳು ಪುನರುಚ್ಚರಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸಂದರ್ಭ ದಲ್ಲಿ ಸಮಾಜಕ್ಕೆ 2 ಎ ಮೀಸಲಾತಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಗದಗದಲ್ಲಿ ಸಚಿವ ಸಿ.ಸಿ. ಪಾಟೀಲ್ ತಾಯಿ ಚೆನ್ನಮ್ಮನ ಆಣೆಯಾಗಿ ಮೀಸಲಾತಿ ನೀಡಿಯೇ ನೀಡಲಾಗುವುದು ಎಂದು ಹೇಳಿದ್ದಾರೆ. ಹಾಗಾಗಿ ಸರ್ಕಾರದ ಮೇಲೆ ಭರವಸೆ ಇದೆ. ಖಂಡಿತವಾಗಿಯೂ ಮೀಸಲಾತಿ ನೀಡುವ ವಿಶ್ವಾಸವೂ ಇದೆ. ಶೇ. 99 ರಷ್ಟು ಯಶಸ್ವಿಯಾಗಿದ್ದೇವೆ. ಶೇ.1 ರಷ್ಟು ಬಾಕಿ ಇದೆ. ಮೀಸಲಾತಿ ವಿಚಾರವಾಗಿ ಈಗಾಗಲೇ ಬಸ್ ಸ್ಟ್ಯಾಂಡ್‌ಗೆ ಬಂದಿದ್ದೇವೆ. ಖಂಡಿತವಾಗಿಯೂ ಈ ಬಾರಿ ಬಸ್ ಹತ್ತಿಯೇ ಹತ್ತುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೆಲವರು ಎಸಿ ರೂಂಗಳಲ್ಲಿ ಕುಳಿತು ಹೋರಾಟ ಮಾಡುತ್ತಾರೆ. ಇನ್ನು ಕೆಲವರು ಬೀದಿಗಿಳಿದು ಹೋರಾಟ ಮಾಡುತ್ತಾರೆ. ನಾವು ನಮ್ಮ ಸಮಾಜದ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ. 20 ವರ್ಷಗಳ ಕಾಲ ಮುಖ್ಯಮಂತ್ರಿಗಳ ಭೇಟಿಯಾಗುವುದು, ಮನವಿ ಸಲ್ಲಿಸುವುದಕ್ಕೆ ನಮ್ಮ ಹೋರಾಟ ಸೀಮಿತವಾಗಿತ್ತು. ಮೀಸಲಾತಿ ಹೋರಾಟಕ್ಕೆ ಜನಾಂದೋಲನದ ರೂಪ ನೀಡದೇ ಹೋದಲ್ಲಿ ಬೇಡಿಕೆ ಈಡೇರಲಾರದು ಎಂಬುದನ್ನ ಮನಗಂಡೇ ಹೋರಾಟಕ್ಕೆ ಇಳಿದಿದ್ದೇವೆ. ಶೇ. 99 ರಷ್ಟು ಯಶಸ್ಸನ್ನೂ ಸಾಧಿಸಿದ್ಧೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂ ಓದಿ:“ಬಿಜೆಪಿ ಸೆರೋಲ್ಲ ಕಾಂಗ್ರೆಸ್‍ನಲ್ಲಿ ಇರೋಲ್ಲ” :ಕ್ಯಾಪ್ಟನ್ ಅಮರೀಂದರ್
ಮೀಸಲಾತಿ ಸಂಬಂಧ ಪಂಚಮಸಾಲಿ ಸಮಾಜದವರು ನಡೆಸುತ್ತಿರುವ ಹೋರಾಟದ ಬಗ್ಗೆ ತಪ್ಪು ಮಾಹಿತಿಯಿಂದ ಹಿಂದುಳಿದ ವರ್ಗಗಳ ಕೆಲವರು ಆಕ್ಷೇಪಣೆ ಮಾಡುತ್ತಿದ್ದಾರೆ. ನಮ್ಮ ಸಮಾಜದಲ್ಲಿ ಶೇ. 90 ರಷ್ಟು ಜನರು ಬಡವರಿದ್ದಾರೆ. ಹರಿಹರ ಇತರೆ ಭಾಗದಲ್ಲಿ ರುವ ಕೆಲವರು ಶ್ರೀಮಂತರ ನೋಡಿ ಸಮಾಜದ ಎಲ್ಲರೂ ಶ್ರೀಮಂತರು ಎಂದು ತಿಳಿದಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿನ ನಮ್ಮ ಸಮಾಜದವರ ನೋಡಿದರೆ ಪರಿಸ್ಥಿತಿ ಏನು ಎಂಬುದು ಗೊತ್ತಾಗುತ್ತದೆ. ಆಕ್ಷೇಪಣೆ ಮಾಡಿದವರೊಡನೆ ಮಾತನಾಡುವುದಾಗಿ ಸ್ವಾಮೀಜಿ ತಿಳಿಸಿದರು.
ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ನೀಡುವ ಜೊತೆಗೆ ಸರ್ಕಾರ ಸಹ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ಆಗ ಇತರೆ ಸಮಾಜದವರಿಗೆ ತೊಂದರೆ ಆಗುವುದಿಲ್ಲ. ಒಟ್ಟಾರೆಯಾಗಿ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕು ಎಂಬುದು ನಮ್ಮ ಒತ್ತಾಯ. ಸರ್ಕಾರ ನೀಡುತ್ತದೆ ಎಂಬ ತುಂಬು ಭರವಸೆ ಇದೆ ಎಂದು ತಿಳಿಸಿದರು.