Advertisement

ಫ್ರೀಡ್‌ಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಾಳೆಯಿಂದ: ರಾಜು

03:41 PM Feb 21, 2018 | Team Udayavani |

ರಾಯಚೂರು: ನ್ಯಾ| ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕೊನೆ ಎಚ್ಚರಿಕೆ ನೀಡುವ ಹಿನ್ನೆಲೆಯಲ್ಲಿ ಕರ್ನಾಟಕ ಮಾದಿಗರ ಸಂಘಟನೆಗಳ ಸ್ವಾಭಿಮಾನದ ಒಕ್ಕೂಟದಿಂದ ಫೆ.22ರಿಂದ 27ರವೆರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ ಎಂದು ರಾಜ್ಯ ಒಕ್ಕೂಟದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜೆ.ಬಿ.ರಾಜು ತಿಳಿಸಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವರದಿ ಜಾರಿಗೆ ಕಳೆದ 2 ದಶಕಗಳಿಂದ ಹೋರಾಟ ನಡೆಸಿದರೂ ಕೇಂದ್ರಕ್ಕೆ ಶಿಫಾರಸು ಮಾಡಿಲ್ಲ. ಈ ಹಿಂದೆ ವರದಿ ಜಾರಿಗಾಗಿ ಅನೇಕ ಹೋರಾಟಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಮಾವೇಶಗಳ ಮೂಲಕ ಗಮನ ಸೆಳೆದಾಗಲೂ ಸುಳ್ಳು ಭರವಸೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಸರ್ಕಾರ ಕೂಡಲೇ ವರದಿ ಜಾರಿಗೆ ಶಿಫಾರಸು ಮಾಡಬೇಕು. ಸಾಮಾಜಿಕ, ಆರ್ಥಿಕ ಜಾತಿಗಣತಿ ವರದಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಎಲ್ಲ ರಾಜಕೀಯ ಪಕ್ಷಗಳು ಮಾದಿಗ ಸಮುದಾಯಕ್ಕೆ 15 ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿದರು.
 
ಆಹೋರಾತ್ರಿ ಧರಣಿಯ ಸಾನಿಧ್ಯವನ್ನು ಹಿರಿಯೂರಿನ ಆದಿಜಾಂಬವ ಕೋಡಿಹಳ್ಳಿ ಮಠದ ಮಾರ್ಕಂಡ ಮುನಿ ಸ್ವಾಮೀಜಿ, ಷಡಕ್ಷರಮುನಿ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಆದಿಜಾಂಬವ ಮಠದ ಬ್ರಹ್ಮಾನಂದಮುನಿ ಸ್ವಾಮೀಜಿ, ಹಂಪಿಯ ಶ್ರೀ ಮಾತಂಗ ಆಶ್ರಮದ ಮಾತಂಗ ಮುನಿಸ್ವಾಮೀಜಿ ವಹಿಸುವರು ಎಂದು ವಿವರಿಸಿದರು.

ಎಂಆರ್‌ಎಚ್‌ ಸಂಸ್ಥಾಪಕ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವರಾಯ ಅಕ್ಕರಕಿ, ಮಾನಪ್ಪ ಮೇಸ್ತ್ರಿ, ಸದಸ್ಯರಾದ ರಾಘವೇಂದ್ರ ಬೋರೆಡ್ಡಿ, ಹೇಮರಾಜ ಅಸ್ಕಿಹಾಳ, ಹನುಮಂತ ಮನ್ನಾಪುರ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next