ಶಿವಮೊಗ್ಗ: ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಸೋಮವಾರ ‘ಛೀ.. ಥೂ’ ವಿಶಿಷ್ಟ ಪ್ರತಿಭಟನೆ ನಡೆಯಿತು.
ಮೂರೂ ರಾಜಕೀಯ ಪಕ್ಷಗಳ ಮುಖಂಡರು, ಶಾಸಕರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಶಿವಪ್ಪ ನಾಯಕ ವೃತ್ತದಲ್ಲಿ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಪ್ರತಿಕೃತಿ ಇಟ್ಟು ಎಲೆ, ಅಡಿಕೆ ತಿಂದು ಛೀ.. ಥೂ ಎಂದು ಅದಕ್ಕೆ ಉಗಿಯುವ ಮೂಲಕ ಪ್ರತಿಭಟಿಸಿದರು. ನಾಗರಿಕರು ಸಹ ಈ ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವ ನಾಶ ಮಾಡಲು ಹೊರಟಿರುವ, ರಾಜೀನಾಮೆ ನೀಡಿರುವ ಶಾಸಕರಿಗೆ ಛೀಮಾರಿ ಹಾಕಿದರು.
ಕೆಲವು ಶಾಸಕರು ಹಣಕ್ಕಾಗಿ ರಾಜೀನಾಮೆ ನೀಡಿದ್ದಾರೆ. ಮತ್ತೆ ಕೆಲ ಪಕ್ಷದ ಮುಖಂಡರು ಅಧಿಕಾರಕ್ಕಾಗಿ ರಾಜೀನಾಮೆ ನೀಡುವಂತೆ ಪ್ರೇರೇಪಣೆ ನೀಡಿದ್ದಾರೆ. ಶಾಸಕರೆಂದರೆ ಮಾರಾಟದ ವಸ್ತುವಾಗಿ ಬಿಟ್ಟಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ಇವರು ರೆಸಾರ್ಟ್‌ಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಾ ತಮ್ಮನ್ನು ಗೆಲ್ಲಿಸಿದ ಮತದಾರರಿಗೆ ಅವಮಾನ ಮಾಡುತ್ತಿದ್ದಾರೆ. ಇವು ಕೂಡ ಅನೈತಿಕ ಚಟುವಟಿಕೆ ಎಂದು ಕಿಡಿಕಾರಿದರು.
ರಾಜ್ಯದ ಮೂರು ಪಕ್ಷಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆಯುತ್ತಿವೆ. ಇಂತಹ ರಾಜಕಾರಣಿಗಳಿಗೆ ಮತದಾರರೇ ಮುಂದೊಂದು ದಿನ ಬುದ್ಧಿ ಕಲಿಸುತ್ತಾರೆ. ಇದೆಲ್ಲ ಸರಿಯಾಗಬೇಕಾದರೆ ಪಕ್ಷಾಂತರ ನಿಷೇಧ ಮಸೂದೆ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು ಮತ್ತು ಸ್ವಾರ್ಥಕ್ಕಾಗಿ, ಹಣಕ್ಕಾಗಿ ಪಕ್ಷಾಂತರ ಮಾಡಿದ ಶಾಸಕರು ಮತ್ತೆಂದೂ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕಾನೂನು ಜಾರಿಯಾಗಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು. ದಾವಣಗೆರೆ, ಚಿತ್ರದುರ್ಗ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಪ್ರಮುಖರಾದ ಕೆ.ರಾಘವೇಂದ್ರ, ಟಿ.ಎಂ.ಚಂದ್ರಪ್ಪ, ಹಿಟ್ಟೂರು ರಾಜು, ಬಿ.ಎಂ.ಚಿಕ್ಕಸ್ವಾಮಿ, ಎಸ್.ಶಿವಮೂರ್ತಿ, ಅರೆಬಿಳಚಿ ಶಿವಣ್ಣ, ರಾಮಚಂದ್ರಪ್ಪ, ಇ.ಬಿ. ಜಗದೀಶ್ ಸೇರಿದಂತೆ ಇತರರು ಇದ್ದರು.