ಸೇಡಂ: ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ದಲಿತರ ಅಭಿವೃದ್ಧಿ ಕಡೆಗಣಿಸಿದ್ದು, ಹಿಂದಿನ ಯೋಜನೆಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿ ದಲಿತ ಸಮನ್ವಯ ಸಮಿತಿಯಿಂದ ಆ.30ರಂದು ಕಲಬುರಗಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮಾದಿಗ ಸಮನ್ವಯ ಸಮಿತಿ ತಾಲೂಕಾಧ್ಯಕ್ಷ ಮಾರುತಿ ಮುಗುಟಿ ಹೇಳಿದರು.
ಈ ಹಿಂದೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಎಚ್. ಆಂಜನೇಯ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ದಲಿತರ ಅಭಿವೃದ್ಧಿಗಾಗಿ ಮಹಿಳಾ ಸಮೃದ್ಧಿ, ಅಂಗವಿಕಲ, ಟಮೈಕೋ ಕ್ರೆಡಿಟ್, ಉದ್ಯಮಶೀಲತಾ ಯೋಜನೆ ಸಹಾಯಧನ, ಗಂಗಾ ಕಲ್ಯಾಣ, ಐರಾವತ, ಪ್ರಭುತ್ವ ಯೋಜನೆ, ಡಾ|ಬಿ. ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮದಿಂದ ಅನೇಕ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಸಾಲ ಸೌಲಭ್ಯ ನೀಡುತ್ತಿದ್ದರು. ಇಂತಹ ಯೋಜನೆಗಳ ಮೂಲಕ ದಲಿತರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಆದರೆ ಬಿಜೆಪಿ ಸರ್ಕಾರ ಈ ಹಿಂದಿನ ಅನೇಕ ಯೋಜನೆಗಳ ಸಹಾಯಧನ ಮತ್ತು ಇತರೆ ಸೌಲಭ್ಯಗಳನ್ನು ಕಡಿಮೆ ಮಾಡಿದೆ ಎಂದು ಆರೋಪಿಸಿದರು.
ಸೆ.17ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಗೆ ಮುಖ್ಯಮಂತ್ರಿ ಕಲಬುರಗಿಗೆ ಆಗಮಿಸುತ್ತಿದ್ದಾರೆ. ಅಂದು ಕಪ್ಪು ಬಾವುಟ ಪ್ರದರ್ಶನ ಮಾಡಿ ಸಿಎಂಗೆ ಘೇರಾವ್ ಹಾಕಲಾಗುವುದು. ಮುಂದಿನ ದಿನಗಳಲ್ಲಿ ಯಾವುದೇ ಸಚಿವರು ಕಲಬುರಗಿಗೆ ಬಂದರೆ ಅವರಿಗೂ ಘೇರಾವ್ ಹಾಕಲಾಗುವದು ಎಂದು ಎಚ್ಚರಿಸಿದರು.
ಸಂಘಟನೆ ಪ್ರಧಾನ ಕಾರ್ಯದರ್ಶಿ ಅಶೋಕ ಫಿರಂಗಿ ಮಾತನಾಡಿ, ಹಿಂದಿನ ಯೋಜನೆಗಳನ್ನು ಯಥಾವತ್ತಾಗಿ ಮುಂದುವರಿಸುವಂತೆ ಹಾಗೂ ದಲಿತ ವಿರೋಧ ನೀತಿ ಅನುಸರಿಸುತ್ತಿರುವ ಸರ್ಕಾರದ ವಿರುದ್ಧ ಕಲಬುರಗಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಡಾ|ಬಾಬು ಜಗಜೀವನರಾಮ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.
ಡಿಎಂಎಸ್‌ಎಸ್ ಮಹಿಳಾ ಘಟಕದ ಅಧ್ಯಕ್ಷೆ ಅಮೃತಮ್ಮ ದುಗನೂರ ಮಾತನಾಡಿ, ಕಲಬುರಗಿಯಲ್ಲಿ ನಡೆಯುವ ಪ್ರತಿಭಟನೆಗೆ ತಾಲೂಕಿನಿಂದ 200 ಮಹಿಳೆಯರು ತೆರಳುತ್ತಿದ್ದೇವೆ ಎಂದು ತಿಳಿಸಿದರು. ಡಿಎಂಎಸ್‌ಎಸ್‌ನ ತಾಲೂಕು ಗೌರವಾಧ್ಯಕ್ಷ ವೆಂಕಟಪ್ಪ ಮೋತಕಪಲ್ಲಿ, ವಲಯ ಅಧ್ಯಕ್ಷ ಭೀಮು ಮುಧೋಳ, ತಾಲೂಕು ಪ್ರಧಾನ ಕಾರ್ಯದರ್ಶಿ ಭಗವಾನ ದೊಡಮನಿ ಇದ್ದರು.