ಸಕಲೇಶಪುರ: ತಾಲೂಕಿನ ಬಾಗೆ ಬೇಲೂರು ರಾಜ್ಯ ಹೆದ್ದಾರಿ ಅಗಲೀಕರಣದ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಜೊತೆಗೆ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ಬೆಳಗೋಡು ಸುತ್ತಮುತ್ತಲ ಗ್ರಾಮಸ್ಥರು ಹೋಬಳಿ ಕೇಂದ್ರ ಬೆಳಗೋಡಿನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ತಾಲೂಕಿನ ಬೆಳಗೋಡಿನಿಂದ ಫಾತಿಮಪುರದವರೆಗೆ ರಾಜ್ಯ ಹೆದ್ದಾರಿ ಅಗಲೀಕರಣ ಕಾಮಗಾರಿ 33 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ. ಕಾಮಗಾರಿಯನ್ನು ಕೊಥಾರಿ ಎನ್ನುವರಿಗೆ ನೀಡಲಾಗಿದ್ದು, ಕಳೆದ ಮೂರು ತಿಂಗಳಿಂದ ಕಾಮಗಾರಿ ನಡೆಯುತ್ತಿದೆ ಎಂದು ಆಪಾದಿಸಿದರು.
ಧೂಳಿನಿಂದ ಕಿರಿಕಿರಿ: ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಸಕಲೇಶಪುರ-ಆಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ. ಕುಮಾರಸ್ವಾಮಿ ಅಂದು 15 ಮೀ. ವರೆಗೆ ರಸ್ತೆ ಅಗಲೀಕರಣ ಮಾಡಲಾಗುವುದೆಂದು ಭರವಸೆ ನೀಡಿದ್ದರು. ಆದರೆ ಇಲ್ಲಿ ಕೇವಲ 9, 10 ಮೀ. ಮಾತ್ರ ಅಗಲೀಕರಣ ನಡೆಯುತ್ತಿದ್ದು, ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ. ಇಡೀ ರಸ್ತೆ ಧೂಳು ಮಯವಾಗಿದ್ದು, ನೀರು ಕೂಡ ಹಾಕದೆ ಜನರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಒಂದೇ ರಸ್ತೆಗೆ ಮೂರು ಬಾರಿ ಗುದ್ದಲಿ ಪೂಜೆ ನೆರವೇರಿಸಲಾಗಿದ್ದು ಬಾಗೆ, ಬೆಳಗೋಡು ಹಾಗೂ ಫಾತಿಮಾಪುರದಲ್ಲಿ ಗುದ್ದಲಿ ಪೂಜೆ ಮಾಡಿದ ಉದ್ದೇಶವೇನು ಎಂಬುದು ಎಲ್ಲರಿಗೂ ಪ್ರಶ್ನೆಯಾಗಿ ಕಾಡುತ್ತಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.
ವಿಳಂಬಕ್ಕೆ ಎಂಜಿನಿಯರ್, ಶಾಸಕರೇ ಹೊಣೆ: ಕೇವಲ 9 ಮೀ.ರಸ್ತೆ ವಿಸ್ತರಣೆ ಮಾಡಿ, ಮರವನ್ನು ಕಡಿಯದೇ, ವಿದ್ಯುತ್ ಕಂಬಗಳನ್ನು ತೆರವುಗೊಳಿಸದೇ ಕೆಲಸ ಮಾಡಲಾಗುತ್ತಿದೆ. ಇಡೀ ರಸ್ತೆ ಅಸ್ತವ್ಯಸ್ತವಾಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ಅಪಘಾತಗಳಿಗೆ ಕಾರಣವಾಗುತ್ತಿದೆ. ಇದಕ್ಕೆ ಗುತ್ತಿಗೆದಾರ ಹಾಗೂ ಎಂಜಿನಿಯರ್ ಹಾಗೂ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರೇ ನೇರ ಹೊಣೆಗಾರರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆಯ ಬದಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯವರು ಕೈಗೊಳ್ಳಬೇಕು. ಭೂಮಿ ಕಳೆದುಕೊಳ್ಳುವವರಿಗೆ ಸೂಕ್ತ ಪರಿಹಾರ ನೀಡಬೇಕು. ಕೂಡಲೇ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕು. ರಸ್ತೆಯನ್ನು 15 ಮೀ. ವರೆಗೆ ವಿಸ್ತರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆ ಅಗಲೀಕರಣಕ್ಕೆ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ನಾಗರಾಜ್ ಹೆತ್ತೂರು, ತಾಪಂ ಸದಸ್ಯ ಯಡೇಹಳ್ಳಿ ಮಂಜುನಾಥ್ ಬೆಳಗೋಡು ಬಸವರಾಜ್, ಹೆನ್ರಿ,ಲೋಕೇಶ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.