ಇಂಡಿ: ತಾಲೂಕಿನ ಹಂಜಗಿ ಗ್ರಾಮದ ವಾರ್ಡ್ ನಂ. 5ರ ಅಂಬೇಡ್ಕರ್ ಕಾಲೋನಿ ಮತ್ತು ಪಂಚಶೀಲ ನಗರ ತಾಂಡಾದಲ್ಲಿ ನೀರು ಪೂರೈಸಬೇಕೆಂದು ಆಗ್ರಹಿಸಿ ಹಂಜಗಿ ಗ್ರಾಮಸ್ಥರು ಬುಧವಾರ ಪಟ್ಟಣದ ಮಿನಿ ವಿಧಾನಸೌಧ ಎದುರು ಖಾಲಿ ಕೊಡಗಳನ್ನಿಟ್ಟು ಪ್ರತಿಭಟಿಸಿದರು.
ಹಂಜಗಿ ಗ್ರಾಮಸ್ಥರು, ಮಹಿಳೆಯರು ಖಾಲಿ ಕೊಡ ಹಿಡಿದು ಪಟ್ಟಣದ ಬಸವೇಶ್ವರ ವೃತ್ತದ ಮೂಲಕ ಮಿನಿ ವಿಧಾನಸೌಧಕ್ಕೆ ಜಾಥಾ ನಡೆಸಿ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯಕ್ಕೆ ಹಾಗೂ ತಾಪಂ ಇಒ ಡಾ| ವಿಜಯಕುಮಾರ ಅಜೂರ ಅವರಿಗೆ ನೀರು ಪೂರೈಸುವಂತೆ ಮನವಿ ಸಲ್ಲಿಸಿದರು.
ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗುತ್ತಿದ್ದು ಈ ಕೂಡಲೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಭೀಕರ ಬಿರು ಬಿಸಿಲಿನಲ್ಲಿ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಕಳೆದ ಮೇ 18 ತಾರೀಖೀನಿಂದ ಇಲ್ಲಿವರೆಗೂ ಟ್ಯಾಂಕರ್ ಮೂಲಕ ನೀರು ಪೂರೈಸುವುದನ್ನು ನಿಲ್ಲಿಸಿದ್ದಾರೆ. ಟ್ಯಾಂಕರ್ ಮಾಲೀಕರಿಗೆ ನೀರು ಒದಗಿಸಿ ಎಂದು ಕೇಳಿದಾಗ ಟ್ಯಾಂಕರ್ ಹಣ ಬಂದಿಲ್ಲ ಎಂದು ಹೇಳುತ್ತಿದ್ದಾರೆ.
ತಾಲೂಕಾಡಳಿತ ಟ್ಯಾಂಕರ ಮಾಲೀಕರಿಗೆ ಯಾವುದೇ ಹಣ ನಿಂತಿಲ್ಲ ಎಂದು ಹೇಳುತ್ತಾರೆ. ಉಳ್ಳವರು ಹಣ ಕೊಟ್ಟು ನೀರು ಹಾಕಿಸಿಕೊಳ್ಳುತ್ತಾರೆ. ಬಡ ಜನತೆ ಹೇಗೆ ಎಂಬುದು ಚಿಂತೆಗೀಡು ಮಾಡಿದೆ. ಕೂಡಲೆ ತಾಲೂಕಾ ಆಡಳಿತ ಎಚ್ಚೆತ್ತು ನೀರು ಪೂರೈಸಬೇಕು ಒಂದು ವೇಳೆ ವಿಳಂಬ ಮಾಡಿದರೆ ಉಗ್ರ ಹೋರಾಟ ಮಾಡಲಾಗುವದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಈ ವೇಳೆ ತಾಪಂ ಅಧಿಕಾರಿ ಡಾ| ವಿಜಯಕುಮಾರ ಅಜೂರ ಹಾಗೂ ಗ್ರಾಮದ ಮುಖಂಡ ಮುತ್ತಪ್ಪ ಪೋತೆ, ತಹಶೀಲ್ದಾರ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಇನ್ನೊಮ್ಮೆ ಹೀಗಾಗದಂತೆ ನೋಡಿಕೊಳ್ಳಲಾಗುವದು. ತ್ವರಿತವಾಗಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದಾಗ ಪ್ರತಿಭಟನೆ ಹಿಂಪಡೆಯಲಾಯಿತು.
ಬಿ.ಡಿ. ಪಾಟೀಲ, ಪ್ರಕಾಶ ಪೋತೆ, ರೇವಪ್ಪ ಕಾಂಬಳೆ, ರಜಾಕ್ ಕಮಾಲಕರ, ಅಜೀತ ಕಾಂಬಳೆ, ಪ್ರಲಾದ ಕಟ್ಟಿಮನಿ, ಮಲ್ಲು ಕಾಂಬಳೆ, ಬಾಳು ಹರಿಜನ, ಬಸು ಸಿಂಧೆ, ವಿಠಾಬಾಯಿ ತಾಂದಳವಾಡಿ, ನಾಗವ್ವ ಬಂಡಾರಿ, ಬಂಗಾರೆವ್ವ ಕಾಂಬಳೆ, ಮಹಾದೇವ ಕಾಂಬಳೆ, ಜಯಮಲಾ ಬಗಲಿ, ಮಲ್ಲವ್ವ ಕಾಂಬಳೆ, ಮಲ್ಲಿಕಾರ್ಜುನ ಕಾಂಬಳೆ ಸೇರಿದಂತೆ ಅನೇಕರಿದ್ದರು.