ಹೂವಿನಹಡಗಲಿ: ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಕುರಿತು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಬೆಂಬಲಿಸಿ ಮತ್ತು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಜಾರಿಗೆ ಒತ್ತಾಯಿಸಿ ಹಡಗಲಿಯಲ್ಲಿ ಭಾರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ವಿವಿಧೆಡೆ ಸಾಗಿ ಲಾಲ್‌ಬಹದ್ದೂರು ಶಾಸ್ತ್ರೀ ವೃತ್ತದಲ್ಲಿ ಬಹಿರಂಗ ಸಭೆ ನಡೆಯಿತು. ವಾಲ್ಮೀಕಿ ಸಮಾಜದ ಗೌರವಾಧ್ಯಕ್ಷರಾದ ಉಳಿಗದ ಹನುಮಂತಪ್ಪ ಮಾತನಾಡಿ, ನಾವು ಅಧಿಕಾರಕ್ಕೆ ಬಂದ ಒಂದೇ ದಿನದಲ್ಲಿ ನಿಮ್ಮ ಮೀಸಲಾತಿ ಹೆಚ್ಚಿಸಿಕೊಡುತ್ತೇವೆ ಎಂದಿದ್ದ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅಧಿಕಾರ ಕಳೆದುಕೊಂಡರು. ಅಧಿಕಾರಕ್ಕೆ ಬಂದ ಮರುಕ್ಷಣವೇ ವಾಲ್ಮೀಕಿ ಸಮಾಜದ ಸಂವಿಧಾನ ಬದ್ಧ ಮೀಸಲಾತಿಯನ್ನು ನೀಡುವುದಾಗಿ ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದಿದ್ದ ಸಚಿವ ಶ್ರೀರಾಮುಲು ಇಂದು ಮೌನವಾಗಿರುವುದು ಸರಿಯಲ್ಲ ಎಂದರು.
ಸರ್ಕಾರ ನಮ್ಮ ಮತ್ತು ಸ್ವಾಮೀಜಿಯವರ ಮನವಿಗೆ ಸ್ಪಂದಿಸದೇ ಇದ್ದಲಿ, ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಮುಖಂಡರಾದ ಜಿ.ಬುಳಪ್ಪ, ಜೆಡಿಎಸ್ ಮುಖಂಡರಾದ ಕೆ.ಪುತ್ರೇಶ್ ಮಾತನಾಡಿ, ಮೀಸಲಾತಿ ಹೆಚ್ಚಿಸದೇ ಇದ್ದಲ್ಲಿ ಶಾಸಕರ ಮತ್ತು ಮಂತ್ರಿಗಳ ಮನೆಗಳಿಗೆ ಮುತ್ತಿಗೆ ಹಾಕುತ್ತೇವೆ ಎಂದರು. ದಲಿತ ಮುಖಂಡರಾದ ಉಚ್ಚೇಂಗೆಪ್ಪ, ತಾಲೂಕು ವಾಲ್ಮೀಕಿ ಸಮಾಜದ ಪ್ರಧಾನ ಕಾರ್ಯದರ್ಶಿ ಪರಸಪ್ಪ, ತಾಲೂಕು ಭೋವಿ ಸಮಾಜದ ಅಧ್ಯಕ್ಷರಾದ ಶ್ರೀನಿವಾಸ್ ಸರ್ಕಾರ ಈ ಕೂಡಲೇ ಮೀಸಲಾತಿಯನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು. ಬಂಜಾರ್ ಸಮಾಜದ ಅಧ್ಯಕ್ಷರಾದ ಡಾ| ಕಠಾರಿ ನಾಯ್ಕ ಮಾತನಾಡಿ, ಇವತ್ತು ನಾವು ನಮಗೆ ದೊರಕಬೇಕಾದ ಶೈಕ್ಷಣಿಕ ಹಕ್ಕನು ಕೇಳುತ್ತಿದ್ದೇವೆ. ನಾವು ಯಾರ ಮನೆ ಆಸ್ತಿಯನ್ನಾಗಲಿ, ಬೇರೆ ಯಾವ ಅಧಿಕಾರವನ್ನಾಗಲಿ ಕೇಳುತಿಲ್ಲ ಎಂದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಎಲ್.ಜಿ ಹೊನ್ನಪ್ಪ, ಪುರಸಭೆ ಸದಸ್ಯರಾದ ಯು. ಹನುಮಂತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಜಿ. ವಸಂತ್, ವಾಲ್ಮೀಕಿ ಸಮಾಜದ ಯುವ ಮುಖಂಡರಾದ ಕೆಂಪ್ಯಾ ಮಂಜುನಾಥ, ದೀಪದ ಕೃಷ್ಣಪ್ಪ, ಹುಂಚಿಕಾಯಿ ಗಿರಿ, ಕೊಂಚಿಕೇರಿ ಯಮುನಪ್ಪ, ಪ್ರಥಮ ದರ್ಜೆ ಗುತ್ತಿಗೆದಾರರಾದ ಎನ್. ಮಾರುತೇಶ್ವರ ನಾಯಕ, ಮೇದಾರ ಸಮಾಜದ ಅಧ್ಯಕ್ಷರಾದ ಎಂ. ಮಂಜುನಾಥ್, ಚಲುವಾದಿ ಸಮಾಜದ ಅಧ್ಯಕ್ಷರಾದ ದ್ಯಾಮಪ್ಪ ಹಾಗೂ ಕೊರವ ಸಮುದಾಯದ ಮುಖಂಡರುಗಳು, ಶಿಳ್ಯಿಕ್ಯಾತರ ಸಮುದಾಯದ ಮುಖಂಡರುಗಳು ಹಾಗೂ ಹೂವಿನಹಡಗಲಿ ತಾಲೂಕಿನ ವಿವಿಧ ಗ್ರಾಮಗಳ ಮುಖಂಡರುಗಳು ಉಪಸ್ಥಿತರಿದ್ದರು.