ಹೊಸಪೇಟೆ: ನ್ಯಾ. ನಾಗಮೋಹನ್ ದಾಸ್ ಅವರ ವರದಿಯನ್ನು ಜಾರಿ ಮಾಡುವ ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ ಹಾಗೂ ಎಸ್‌ಟಿ ಸಮಾಜಕ್ಕೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಸ್ವಾಭಿಮಾನಿ ಪ.ಜಾತಿ ಮತ್ತು ಪ.ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿಯಿಂದ ನಗರದಲ್ಲಿ ಎಸ್‌ಸಿ/ ಎಸ್‌ಸಿ ಸಮಾಜ ಬಾಂಧವರು ಶುಕ್ರವಾರ ಅರಬೆತ್ತಲೆ ಪ್ರತಿಭಟನೆ ನಡೆಸಿದರು.
ನಗರದ ವಾಲ್ಮೀಕಿ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಮದಕರಿ ವೃತ್ತ, ದೊಡ್ಡ ಮಸೀದ್, ಗಾಂಧಿ ಚೌಕ್, ಪುಣ್ಯಮೂರ್ತಿ ವೃತ್ತ, ಕೇಂದ್ರ ಬಸ್‌ನಿಲ್ದಾಣ, ಮಾರ್ಡನ್ ವೃತ್ತ ಮಾರ್ಗವಾಗಿ ಪುನೀತ್ ರಾಜ್‌ಕುಮಾರ್ ವೃತ್ತಕ್ಕೆ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು. ಎಸ್‌ಸಿ ಜನಾಂಗಕ್ಕೆ ಶೇ.15 ರಿಂದ ಶೇ.17 ಮತ್ತು ಎಸ್‌ಟಿ ಜನಾಂಗಕ್ಕೆ ಶೇ. 3ರಿಂದ ಶೇ. 7.5 ಮೀಸಲಾತಿಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ನಡೆಸುತ್ತಿರುವ 100 ದಿನಗಳ ಅನಿರ್ದಿಷ್ಟ ಧರಣಿಯನ್ನು ಬೆಂಬಲಿಸಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದರು. ಹೋರಾಟ ಸಮಿತಿಯ ಮರಡಿ ಜಂಬಯ್ಯನಾಯಕ, ಬಿ.ಎಸ್.ಜಂಬಯ್ಯನಾಯಕ, ವೀರಸ್ವಾಮಿ, ಪಿ.ವೆಂಕಟೇಶ್, ಪೂಜಾರಿ ದುರುಗಪ್ಪ, ಕಿಚಡಿ ಶ್ರೀನಿವಾಸ, ಡಿ.ವೆಂಕಟರಮಣ, ಸೋಮಶೇಖರ್ ಬಣ್ಣದ ಮನೆ, ತಾಯಪ್ಪ ನಾಯಕ, ಪಿ.ವೆಂಕಟೇಶ್, ಬಿ.ರಮೇಶ್ ಇನ್ನಿತರರಿದ್ದರು.
ಕಮಲಾಪುರ
ಜನಸಂಖ್ಯೆ ಅನುಗುಣವಾಗಿ ಎಸ್‌ಸಿ, ಎಸ್‌ಟಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಕಮಲಾಪುರದಲ್ಲಿ ಎಸ್‌ಸಿ, ಎಸ್‌ಟಿ ಸಮಾಜ ಬಾಂಧವರು ಶುಕ್ರವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ರೈತ ಭವನದಿಂದ ಆರಂಭವಾದ ಕೃಷ್ಣದೇವರಾಯ ವೃತ್ತ, ವಾಲ್ಮೀಕಿ ವೃತ್ತ, ಬಾಬು ಜಗಜೀವನ್ ರಾವ್ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಹಂಪಿ ರಸ್ತೆಯ ಪ್ರವಾಸಿ ಮಂದಿರದ ರಸ್ತೆಯಲ್ಲಿ ಪ್ರತಿಭಟನೆ ಮೆರವಣಿಗೆ ಸಮಾವೇಶಗೊಂಡಿತು.
ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಜಾರಿಗೆ ಆಗ್ರಹಿಸಿ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಕೈಗೊಂಡಿರುವ ಪ್ರತಿಭಟನೆ 100ನೇ ದಿನ ಪೂರೈಸಿದ ಅಂಗವಾಗಿ ರಾಜ್ಯಾದಂತ ಎಸ್ಸಿ/ಎಸ್ಟಿ ಸಮುದಾಯ ಬಾಂಧವರು ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹಾಕಿದರು. ದಲಿತ ಹಾಗೂ ವಾಲ್ಮೀಕಿ ಸಮಾಜದ ಮುಖಂಡರು, ಯುವಕರು ಇನ್ನಿತರರಿದ್ದರು.