ಬಂಕಾಪುರ: ತಹಶೀಲ್ದಾರ್ ಚಂದ್ರಶೇಖರ ಗಾಳಿ ಅವರ ಆದೇಶದ ಮೇರೆಗೆ ಕಲ್ಯಾಣದ ರೈತ ಶಿವನಗೌಡ ಪಾಟೀಲರನ್ನು ಬಂಧಿ ಸಿ ಜೈಲಿನಲ್ಲಿರಿಸಿರುವುದನ್ನು ಖಂಡಿಸಿ, ಬಿಡುಗಡೆಗೊಳಿಸುವಂತೆ ಆಗ್ರಹಿಸಿ ತಾಲೂಕು ಅನ್ನದಾತ ರೈತ ಹೋರಾಟ ಸಮಿತಿ ಆಶ್ರಯದಲ್ಲಿ ರೈತರು ಉಪತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದರು.
ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎಂದು ತಹಶೀಲ್ದಾರ್ ಗಾಳಿ ಸುಳ್ಳು ಆರೋಪ ಹೊರಿಸಿ ರೈತ ಶಿವನಗೌಡ ಪಾಟೀಲ ಅವರನ್ನು ಹೊಲದಲ್ಲಿಯೇ ಬಂಧಿಸಿ ಏಳು ದಿನಗಳಿಂದ ಜೈಲಿನಲ್ಲಿರಿಸಿರುವುದು ಖೇದಕರ ಸಂಗತಿ. ತಮ್ಮ ಹಕ್ಕಿಗಾಗಿ ಹೋರಾಡುವ ರೈತರನ್ನು ಬಂಧಿಸಿ ಧ್ವನಿ ಅಡಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಧರಣಿ ನಿರತರು ಆರೋಪಿಸಿದರು.
ಉಪತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಧರಣಿ ಹಿಂಪಡೆಯುವಂತೆ ಸಿಪಿಐ ಬಸವರಾಜ ಹಳಬಣ್ಣವರ ಮನವಿ ಮಾಡಿದರು. ಮನವಿಗೆ ಸ್ಪಂದಿಸದ ರೈತ ಹೋರಾಟ ಸಮಿತಿಯವರು ಉಪವಿಭಾಗಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಹಾಗೂ ರೈತನನ್ನು ಬಿಡುಗಡೆ ಗೊಳಿಸುವರೆಗೂ ಧರಣಿ ಮುಂದುವರೆಸುವುದಾಗಿ ಪಟ್ಟು ಹಿಡಿದರು. ತಾಲೂಕಾಡಳಿತಕ್ಕೆ ಧಿಕ್ಕಾರದ ಘೋಷಣೆ ಕೂಗುವ ಮೂಲಕ ಧರಣಿ ಮುಂದುವರೆಸಿದರು.
ವಿಷಯ ಅರಿತ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಣ್ಣನವರ ಸ್ಥಳಕ್ಕಾಗಮಿಸಿ ಚರ್ಚಿಸಿದರು. ನಂತರ ಬಂಧಿತ ರೈತನನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಆದೇಶಿಸಿದರು. ಈ ವಿಷಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತಿಳಿಸಲಾಗುವುದು ಎಂದು ಹೇಳಿದ ನಂತರ ಧರಣಿ ನಿರತರು ಧರಣಿ ಹಿಂಪಡೆದರು. ನಂತರ ಧರಣಿ ನಿರತರು ಉಪವಿಬಾಗಾಧಿಕಾರಿ ಅನ್ನಪೂರ್ಣ ಮುದಕಣ್ಣನವರ ಮೂಲಕ ಸರಕಾರದ ಮುಖ್ಯ ಪ್ರಧಾನ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದರು.
ರೈತ ಹೋರಾಟ ಸಮಿತಿ ಅಧ್ಯಕ್ಷ ಗಂಗಾಧರ ಗಡ್ಡೆ, ಕಾರ್ಯದರ್ಶಿ ನವೀನ ಸವಣೂರ, ವಿರುಪಾಕ್ಷಗೌಡ ಪಾಟೀಲ, ನಾಗರಾಜ ಪಾಟೀಲ, ಮಲ್ಲೇಶಪ್ಪ ಬೂದಿಹಾಳ, ಚಂದ್ರಶೇಖರ ಮಾನೋಜಿ, ಯಲ್ಲಪ್ಪ ಹೊಸಪೇಟೆ, ಶಂಕರಗೌಡ ಪಾಟೀಲ, ಪಂಚಾಕ್ಷರಿ ಉಪ್ಪಣಸಿ, ನಿಂಗಪ್ಪ ಬನ್ನೂರ, ಉಳವಯ್ಯ ಚಿಗರಿಮಠ, ನಿಂಗಪ್ಪ ಒಡಣ್ಣಿ, ಬಸವರಾಜ ಮೇಳ್ಳಾಗಟ್ಟಿ, ಚನ್ನವೀರಪ್ಪ ಮಲ್ಲಿವಾಡ, ಬೂದಪ್ಪ ಬೂದ್ಯಾಳ, ಪರಸಪ್ಪ ಆರೇರ್, ವಿ.ಎಸ್.ಚೌಕಿಮಠ, ಬಸಪ್ಪ ಕೋರಿ ಸೇರಿದಂತೆ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.