ಕೂಡಲಸಂಗಮ: ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿ ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಮಹಿಳೆಯರು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ತ್ರಿವೇಣಿ ಸಂಗಮದಲ್ಲಿ ಜಲ ಸತ್ಯಾಗ್ರಹ ಆರಂಭಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಮಹಿಳೆಯರು, ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ತ್ರಿವೇಣಿ ಸಂಗಮವಾದ ಕೂಡಲಸಂಗಮದ ಸಂಗಮೇಶ್ವರ ದೇವಾಲಯ ಹೊರ ಆವರಣದ ರಥ ಬೀದಿಯ ಪಕ್ಕದ ಕೃಷ್ಣಾ ನದಿಯಲ್ಲಿ ಎದೆಮಟ ನೀರಿನಲ್ಲಿ ನಿಂತು ಮದ್ಯ ನಿಷೇಧಿಸುವಂತೆ ಒತ್ತಾಯಿಸಿದರು. ಹೆಂಡ ಬೇಡ-ತುಂಡು ಭೂಮಿ ಬೇಕು, ಬೀರು-ಬೇಡ ನೀರು ಬೇಕು, ಅಮಲೀನ ಕೇಂದ್ರ ಬೇಡ -ಆರೋಗ್ಯ ಕೇಂದ್ರ ಬೇಕು, ಸಾರಾಯಿ ಬೇಡ -ಶಿಕ್ಷಣ ಬೇಕು, ಸರಾಯಿ ತೆರಿಗೆ ಕೋಟಿ ಕೋಟಿ- ಬಡವರ ಜೀವನ ಲೂಟಿ ಲೂಟಿ ಎಂಬ ಘೋಷಣೆ ಕೂಗುತ್ತ ಮದ್ಯ ನಿಷೇಧ ಮಾಡಲೇಬೇಕೆಂದು ಹಕ್ಕೋತ್ತಾಯ ಮಂಡಿಸಿದರು.
ಏನೇ ಬರಲಿ ಒಗ್ಗಟ್ಟಿರಲ್ಲಿ, ಗೆಲ್ಲುವವರೆಗೆ ಹೋರಾಟ ಎಂಬ ಗೂಗಿನ ವಿಭಿನ್ನ ರೀತಿಯ ಮದ್ಯಪಾನ ನಿಷೇದ ಹೋರಾಟ ಮಂಗಳವಾರ ಸುಕ್ಷೇತ್ರಕ್ಕೆ ಆಗಮಿಸಿದ ಪ್ರವಾಸಿಗರು ಭಕ್ತರ ಮನ ಕುಲಕುವಂತೆ ಮಾಡಿತ್ತು, ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಎಂದು ಬಂದ ಪ್ರವಾಸಿಗರು ಭಕ್ತರು ಹೋರಾಟಗಾರರಿಗೆ ಬೆಂಬಲ ಕೊಟ್ಟರು.ಬೆಳಗ್ಗೆ 9 ಗಂಟೆಯ ಸುಮಾರಿಗೆ 150 ಜನರ ತಂಡ ಎದೆಮಟ ನೀರಿಗೆ ಇಳಿದು ಹೋರಾಟ ಆರಂಭಿಸಿದರು.
ಘೋಷಣೆಗಳ ಮಧ್ಯೆ ಯಾರಿಗೆ ಹೇಳಲೆವ್ವ ನನ್ನ ಬಾಳಿನ ಕಥೆಯನ್ನು, ಗೊಳಿನ ಕಥೆಯನ್ನು, ತಂದೆ ಸತ್ತ, ಮಾವ ಸತ್ತ, ಮಗ ಸತ್ತ…. ಹಾಡಿಗೆ ಹಲಗೆ ನಾದ ಮೆರಗು ಕೊಟ್ಟರೆ, ಸತ್ಯಾಗ್ರಹ ವೀಕ್ಷಣೆಗೆ ಬಂದವರು, ಹೋರಾಟಗಾರ ಹಾಡು, ನೋವು ಕೇಳಿ ಕಣ್ಣಿರಾದರು.
150 ಜನರ ತಂಡ 1ರಿಂದ 2ಗಂಟೆ ನಡುಮಟ್ಟದ ನೀರಿನಲ್ಲಿ ನಿಲ್ಲುವುದು. ಪಾಳೆ ಪದ್ದತಿಯಂತೆ ಸತ್ಯಾಗ್ರಹಿಗಳು ನಿಲ್ಲಲು ನದಿ ದಡದಲ್ಲಿ ಕುಳಿತಿದ್ದರು. ರಾಜ್ಯದ 16 ಜಿಲ್ಲೆಯಿಂದ 800ಕ್ಕೂ ಅಧಿಕ ಹೋರಾಟಗಾರರು ಮಂಗಳವಾರ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಹೋರಾಟದ ಸ್ಥಳದ ನದಿಯ ಬದಿಯಲ್ಲಿ ಮುಂಜಾಗ್ರತೆಗಾಗಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ದೋಣಿ ನಿಲ್ಲಿಸಿತ್ತು. ಈ ಜಲ ಸತ್ಯಾಗ್ರಹ ಬುಧವಾರ ಮುಂದುವರಿಯಲಿದೆ. ಗುರುವಾರ ಸಮಾವೇಶದ ಮೂಲಕ ಸರ್ಕಾರಕ್ಕೆ ಮದ್ಯಪಾನ ನಿಷೇಧಿಸುವಂತೆ ನಾಡಿನ ವಿವಿಧ ಸ್ವಾಮೀಜಿಗಳೊಂದಿಗೆ ಸಮಾವೇಶ ನಡೆಸಿ, ಒತ್ತಾಯಿಸುತ್ತೇವೆ. ಅಷ್ಟಕ್ಕೂ ಸರ್ಕಾರದಿಂದ ಸೂಕ್ತ ಭರವಸೆ ಬರದಿದ್ದರೆ ಮುಂದಿನ ಹೋರಾಟದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆಯ ಸ್ವರ್ಣಾ ಭಟ್ ಎಚ್ಚರಿಕೆ ನೀಡಿದರು.