ದಾವಣಗೆರೆ: ನಿವೃತ್ತ ಅಸಂಘಟಿತ ವಲಯದ ಕಾರ್ಮಿಕರ ಜೀವನೋಪಾಯಕ್ಕಾಗಿ 6 ಸಾವಿರ ರೂ. ಮಾಸಿಕ ಪಿಂಚಣಿ ನಿಗದಿ, ಕುಂದುಕೊರತೆ ಆಲಿಸಲು ಅದಾಲತ್ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಗುರುವಾರ ನಿವೃತ್ತ ಅಸಂಘಟಿತ ವಲಯದಕಾರ್ಮಿಕರ ಯೂನಿಯನ್‌ಗಳ ಒಕ್ಕೂಟದ ನೇತೃತ್ವದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಯೊಂದು ನಗರದ ಸ್ಲಂಗಳಲ್ಲಿ ನಿವೃತ್ತ ಅಸಂಘಟಿತ ಕಾರ್ಮಿಕರು ನಿರ್ಮಾಣ ಮತ್ತು ಸ್ವಚ್ಚತೆಗೆ ತಮ್ಮ ಅತ್ಯಮೂಲ್ಯವಾದ 40 ವರ್ಷಗಳಶ್ರಮದ ಕೆಲಸ ಮಾಡಿದ್ದಾರೆ. ಅಂತಹವರು ಈಗಲೂ ದುಡಿಯದೇ ಹೋದರೆ ಹೊಟ್ಟೆಗೆ ಹಿಟ್ಟಿಲ್ಲದೆ, ಆರೋಗ್ಯ ಚಿಕಿತ್ಸೆಗೂ ಬಿಡಿಗಾಸು ಇಲ್ಲದಂತಹ ಸ್ಥಿತಿಯಲ್ಲಿದ್ದಾರೆ. ಸರ್ಕಾರಗಳು ನಿವೃತ್ತ ಅಸಂಘಟಿತ ವಲಯದ ಕಾರ್ಮಿಕರ ಜೀವನೋಪಾಯಕ್ಕಾಗಿ 6 ಸಾವಿರ ರೂ. ಮಾಸಿಕ ಪಿಂಚಣಿ ನಿಗದಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕೋವಿಡ್-19 ದಿಂದಾಗಿ ನಿವೃತ್ತ ಅಸಂಘಟಿತ ಕಾರ್ಮಿಕರು ಮಾಡುತ್ತಿದ್ದ ಕೆಲಸಕ್ಕೂ ಅವಕಾಶವಿಲ್ಲದೆ, ಮಾತ್ರೆಗಳನ್ನು ಕೊಂಡುಕೊಳ್ಳಲು ಹಣವಿಲ್ಲದೆ ಒದ್ದಾಡುವಂತಹ ಪರಿಸ್ಥಿತಿಯಲ್ಲಿ ಇದ್ದಾರೆ. ನಿವೃತ್ತರು ಮನೆಯಿಂದ ಹೊರಗಡೆ ಬರಬಾರದೆಂಬ ಸರ್ಕಾರದ ಆದೇಶದ ಜೊತೆಗೆ ಕೇಂದ್ರ ಸರ್ಕಾರದ ವತಿಯಿಂದ ಏಪ್ರಿಲ್,ಮೇ ಮತ್ತು ಜೂನ್ ತಿಂಗಳ ಸಾಮಾಜಿಕ ಭದ್ರತೆಯಾದ ಪಿಂಚಣಿಯು ಖಾತೆಗೆ ಬಂದುತಲುಪುತ್ತದೆ ಎಂದು ತುಂಬಾ ಖುಷಿಪಟ್ಟರು. ಆದರೆ ಇನ್ನೂ 8 ತಿಂಗಳಿನಿಂದ ಮಾಸಿಕ ಪಿಂಚಣಿ ಸಿಗದೆ ಕಂಗಾಲಾಗಿರುವ ನಿವೃತ್ತರ ಜೀವನ ಕತ್ತಿ ಮೇಲೆ ತೂಗಾಡುತ್ತಿದೆ ಎಂದು ಅಳಲು ತೋಡಿಕೊಂಡರು.
ನಿವೃತ್ತ ಅಸಂಘಟಿತರಿಗೆ ಆಧಾರ ಕಾರ್ಡ್ ಲಿಂಕ್ ಮಾಡಿಲ್ಲ ಹಾಗೂ ಜೀವಂತ ಪ್ರಮಾಣಪತ್ರ ಸಲ್ಲಿಸದೇ ಇರುವುದರಿಂದ ಪಿಂಚಣಿ ನಿಲ್ಲಿಸಲಾಗಿದೆಂದು ತಿಳಿಸಿರುವುದು ತುಂಬಾ ಆಶ್ಚರ್ಯಕರ ಸಂಗತಿ. ಪಿಂಚಣಿ ಆದೇಶದ ಪ್ರತಿ, ಆಧಾರ ಕಾರ್ಡ್ ಪ್ರತಿಗಳನ್ನು ನಾಡ ಕಚೇರಿಗಳಲ್ಲಿ ಸಲ್ಲಿಸಲು ತಿಳಿಸಿದ್ದಾರೆ. ನಿವೃತ್ತ ಅಸಂಘಟಿತ ಕಾರ್ಮಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪಿಂಚಣಿ ಅರ್ಜಿ ಜೊತೆಗೆ ಈಗಾಗಲೇ ಎಲ್ಲಾ ದಾಖಲಾತಿಗಳು ಕೊಟ್ಟಿರುವುದರಿಂದ ತಾವೇ ಬ್ಯಾಂಕ್ ಖಾತೆ ಇರುವವರಿಗೆ ಬ್ಯಾಂಕ್, ಅಂಚೆ ಕಚೇರಿಯಲ್ಲಿ ಲಿಂಕ್ ಮಾಡಿ ಹಣ ತಲುಪಿಸುವವ್ಯವಸ್ಥೆ ಮಾಡಬೇಕು. ಸ್ಥಗಿತಗೊಳಿಸಿರುವಪಿಂಚಣಿ ಪುನಾರಂಭಿಸುವುದು, ನಿವೃತ್ತ ಹಿರಿಯ ಕಾರ್ಮಿಕರ ಮನೆಬಾಗಿಲಿಗೆ ಆರೋಗ್ಯ ವ್ಯವಸ್ಥೆಮತ್ತು ಉಚಿತ ಚಿಕಿತ್ಸೆ ವ್ಯವಸ್ಥೆ ಮಾಡಬೇಕು ಎಂದರು.
ಜಿಲ್ಲಾಧ್ಯಕ್ಷ ಬಾಬು ಸಾಬ್, ಕಾರ್ಯದರ್ಶಿ ಜಬೀನಾ ಖಾನಂ, ಖಮರುನ್ನೀಸಾ, ಎಂ. ಕರಿಬಸಪ್ಪ, ಅನ್ವರ್‌ಖಾನ್, ಶ್ರೀನಿವಾಸ್, ಅಬ್ದುಲ್ ಘನಿ ತಾಹೀರ್ ಇತರರು ಇದ್ದರು.