ಭೋಪಾಲ್(ಮಧ್ಯಪ್ರದೇಶ): ರಸಗೊಬ್ಬರ ವಿತರಣಾ ಕೇಂದ್ರದೊಳಗೆ ನುಗ್ಗಿ ಯೂರಿಯಾವನ್ನು ಲೂಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಮತ್ತು ಕೆಲವು ವ್ಯಕ್ತಿಗಳ ವಿರುದ್ಧ ಎಫ್ ಐಆರ್ ದಾಖಲಾಗಿರುವ ಘಟನೆ ರಟ್ಲಾಮ್ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಕಳೆದ 8 ವರ್ಷಗಳಲ್ಲಿ ಆರ್ಥಿಕತೆ ಬಲಪಡಿಸುವಲ್ಲಿ ಉತ್ತಮ ಕೆಲಸವಾಗಿದೆ: ಅಮಿತ್ ಶಾ
ತಮಗೆ ರಸಗೊಬ್ಬರವನ್ನು ವಿತರಿಸುತ್ತಿಲ್ಲ ಎಂದು ರಟ್ಲಾಮ್ ಜಿಲ್ಲೆಯ ರೈತರು ಆರೋಪಿಸಿದ ನಂತರ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ. ಗುರುವಾರ ಸಂಜೆ ಕಾಂಗ್ರೆಸ್ ಶಾಸಕ ಮನೋಜ್ ಚಾವ್ಲಾ, ಕಾಂಗ್ರೆಸ್ ಮುಖಂಡ ಯೋಗೇಂದ್ರ ಸಿಂಗ್ ಜಡೋನ್ ಹಾಗೂ ರೈತರು ಘಟನೆಯಲ್ಲಿ ಶಾಮೀಲಾಗಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ತಿವಾರಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ, ಲೂಟಿ ಪ್ರಕರಣವನ್ನು ದಾಖಲಿಸಲಾಗಿದೆ. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ಲೂಟಿಯಲ್ಲಿ ಭಾಗಿಯಾದವರನ್ನು ಗುರುತಿಸಲು ವಿಡಿಯೋವನ್ನು ಪರಿಶೀಲಿಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಜಿಲ್ಲೆಯಲ್ಲಿ ಯೂರಿಯಾ ಕೊರತೆ ಇಲ್ಲ. ರಸಗೊಬ್ಬರವನ್ನು ರೈತರಿಗೆ ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನರೇಂದ್ರ ಕುಮಾರ್ ಸೂರ್ಯವಂಶಿ ತಿಳಿಸಿದ್ದಾರೆ. ರಸಗೊಬ್ಬರ ವಿತರಣಾ ಕೇಂದ್ರದ ಬಳಿ ಕೆಲವು ರೈತರು ಕಾಯುತ್ತಿದ್ದು, ಈ ಸಂದರ್ಭದಲ್ಲಿ ಯೂರಿಯಾ ವಿತರಿಸುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಶಾಸಕ ಚಾವ್ಲಾ ಅವರು ಆಗಮಿಸಿದ ನಂತರ ಲೂಟಿ ಘಟನೆ ನಡೆದಿರುವುದಾಗಿ ವರದಿ ಹೇಳಿದೆ.