ಕೋಲಾರ: ನಗರಸಭೆ ಅಕ್ರಮಗಳಿಂದ ನಾರುತ್ತಿದೆ, ಜನರ ಕಷ್ಟಗಳನ್ನು ಕೇಳುವವರು ಇಲ್ಲವಾಗಿದೆ. 5ನೇ ವಾರ್ಡ್‌ನಲ್ಲಿ ಕುಡಿಯುವ ನೀರು ನೀಡಿ ತಿಂಗಳುಗಳೇ ಉರುಳಿವೆ. ಈ ಎಲ್ಲಾ ಸಮಸ್ಯೆಗಳಿಗೆ ಕಡಿವಾಣ ಹಾಕಿ ಎಂದು ಆಗ್ರಹಿಸಿ ಅಂಬೇಡ್ಕರ್ ಸೇವಾ ಸಮಿತಿ ಕಾರ್ಯಕರ್ತರು ನಗರಸಭೆ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಮಿತಿ ಸಂಸ್ಥಾಪಕ ಕೆ.ಎಂ.ಸಂದೇಶ್, 5ನೇ ವಾರ್ಡ್‌ನ ಅಂಬೇಡ್ಕರ್ ಕಾಲೋನಿಯಲ್ಲಿ ಕುಡಿಯುವ ನೀರಿಲ್ಲದೆ ಜನತೆ ಪರದಾಡುವಂತಾಗಿದೆ. 600 ರೂ. ನೀಡಿ ಖಾಸಗಿ ಟ್ಯಾಂಕರ್ ನೀರು ಪಡೆಯುವ ಸ್ಥಿತಿಯಲ್ಲಿ ಬಡ ನಿವಾಸಿಗಳಿಲ್ಲ. ಎಂಟು ತಿಂಗಳ ಹಿಂದೆ ಇದ್ದ ನೀರಿನ ಸಂಪರ್ಕ ಕಡಿತ ಮಾಡಿ ಹೊಸಲೈನ್ ಎಳೆದಿದ್ದರೂ ನೀರೇ ಬರುತ್ತಿಲ್ಲ ಎಂದು ಆರೋಪಿಸಿದರು.
ನೀರುಗಂಟಿ ಬದಲಿಸಿ: ನೀರಿನ ಸಮಸ್ಯೆ ಇದ್ದರೂ ನೀರುಗಂಟಿ ಸ್ಪಂದಿಸುತ್ತಿಲ್ಲ, ಪ್ರಶ್ನಿಸಿದರೆ ನಗರಸಭೆ ಪೌರಾಯುಕ್ತ, ಡಿ.ಸಿ.ಗೆ ದೂರು ನೀಡ್ತಿರೋ ನೀಡಿ ಎಂದು ಬೇಜವಾಬ್ದಾರಿಯಿಂದ ಉತ್ತರಿಸುತ್ತಿದ್ದಾರೆ. ಈ ಕೂಡಲೇ ಇವರನ್ನು ಬದಲಿಸಬೇಕು ಎಂದು ಒತ್ತಾಯಿಸಿದರು.
ಕಳಪೆ ಕಾಮಗಾರಿ: ನಗರಸಭೆಯಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿದೆ. ಹಲವು ಬೋರ್‌ವೆಲ್ಗಳಲ್ಲಿ ಪಂಪ್‌ಮೋಟಾರ್ ಕಾಣೆಯಾಗಿದೆ, ದುರಸ್ತಿಗೆ 1 ಲಕ್ಷ ರೂ. ಖರ್ಚು ಮಾಡಿರುವ ರೀತಿ ಬಿಲ್ ಸಿದ್ದಪಡಿಸಿ ದ್ದಾರೆ. ನಗರಸಭೆ ಆರೋಗ್ಯ ವಿಭಾಗದಲ್ಲಿ ರೋಗಗಳ ನಿಯಂತ್ರಣಕ್ಕೆ ತಂದಿರುವ ನೈರ್ಮಲ್ಯ ಸಾಮಗ್ರಿ ಬಳಸಿಲ್ಲ. ಚಿಕ್ಕಚನ್ನಂಜಪ್ಪ ಉದ್ಯಾನದಲ್ಲಿ ಕಳಪೆ ಕಾಮ ಗಾರಿ ನಡೆದಿದೆ ಎಂದು ಆರೋಪಿಸಿದರು.
ಕಟ್ಟಡ ಪರವಾನಗಿ ಸಂಬಂಧ ನಗರಸಭೆಯ ಎಇಇ ಬಳಿ ಇರಬೇಕಾದ ಯೋಜನೆ ಅನುಮೋದನೆ ನಕಾಶೆಯ ಆನ್‌ಲೈನ್ ಕೀ ಖಾಸಗಿ ವ್ಯಕ್ತಿಯ ಬಳಿ ಇದ್ದು, ಕಟ್ಟಡ ಪರವಾನಗಿಗೆ 1ರಿಂದ 2 ಲಕ್ಷ ರೂ. ಹಣ ವಸೂಲಿ ಮಾಡಲಾಗುತ್ತಿದೆ. ಉಚಿತವಾಗಿ ನೀಡಬೇಕಿರುವ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ದತಿಯ ರಸೀದಿದೆ 100 ರಿಂದ 200 ರೂ. ವಸೂಲಿ ಮಾಡುತ್ತಿದ್ದಾರೆ ಎಂದು ಆಪಾದಿಸಿದ ಅವರು ಈ ಎಲ್ಲ ಅಂಶಗಳ ಬಗ್ಗೆ ತನಿಖೆ ನಡೆಸಿ ಪೌರಾಯುಕ್ತರು, ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಗ್ರೇಡ್2 ತಹಶೀಲ್ದಾರ್ ಸುಜಾತ ಅವರಿಗೆ ಮನವಿ ಸಲ್ಲಿಸಿದರು. ಸಮಿತಿ ಯುವ ಘಟಕದ ರಾಜ್ಯಾಧ್ಯಕ್ಷ ನವೀನ್ ಮಹರಾಜ್, ಪದಾಧಿಕಾರಿ ಗಳಾದ ವಿಜಯಕುಮಾರ್, ಶ್ರೀನಿವಾಸ್, ಸಿದ್ಧಿಕ್ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.