ಔರಾದ: ಉದ್ದು, ಹೆಸರು ಹಾಗೂ ಸೋಯಾಬಿನ್ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಜತೆಗೆಕೂಡಲೇ ಖರೀದಿ ಕೇಂದ್ರ ಆರಂಭಿಸಲು ಮುಂದಾಗಬೇಕು ಎಂದು ಆಗ್ರಹಿಸಿ ರೈತ ಸಂಘದ ಸದಸ್ಯರು ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸೋಮವಾರ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಮಂತ ಬಿರಾದಾರ ನೇತೃತ್ವದಲ್ಲಿ ಶಿವಾನಂದ ಯನಗುಂದಾ, ಝರೆಣ್ಣೆಪ್ಪ ದೇಶಮುಖ, ಶಿವಶಂಕರ ಎಕಲಾರ, ಪ್ರಕಾಶ ಬಾವಗೆ, ನಾಮದೇವ ಪಾಟೀಲ ಸೇರಿದಂತೆ ಇನ್ನಿತರರು ಜಮಾಯಿಸಿ ಜಿಲ್ಲಾ ಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಎಪಿಎಂಸಿ ಕಾರ್ಯದರ್ಶಿಗೆ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ಶ್ರೀಮಂತ ಬಿರಾದಾರ ಮಾತನಾಡಿ, ಗಡಿ ತಾಲೂಕಿನಲ್ಲಿರುವ ರೈತರು ಕಳೆದ ಮೂರು ವರ್ಷಗಳಿಂದ ಭೀಕರ ಬರಗಾಲದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿಯೂ ತಾಲೂಕಿನಲ್ಲಿ ವಾಡಿಕೆಯಂತೆ ಮಳೆಯಾಗಿಲ್ಲ. ಸರ್ಕಾರ ಮುಂಗಾರು ಹಂಗಾಮಿನ ಬೆಳೆಗಳಿಗೆ ಕೂಡಲೇ ಬೆಂಬಲ ಬೆಲೆ ನಿಗ ದಿ ಮಾಡಿ ಖರೀದಿ ಕೇಂದ್ರ ಆರಂಭಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಶಿವಾನಂದ ಯನಗುಂದಾ ಮಾತನಾಡಿ, ತಾಲೂಕಿನ ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ರೈತರ ಹೊಲದಲ್ಲಿನ ಬೆಳೆಗಳು ಮಾರುಕಟ್ಟೆಗೆ ಬರುವುದಕ್ಕಿಂತ ಮೊದಲೇ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಅಲ್ಲದೇ ಖರೀದಿ ಕೇಂದ್ರ ಆರಂಭಿಸಬೇಕು. ಪ್ರತಿ ವರ್ಷ ರೈತರ ಹೊಲದಲ್ಲಿನ ಧಾನ್ಯಗಳು ಕೃಷಿ ಮಾರುಕಟ್ಟೆಗೆ ಸೇರಿದ ಬಳಿಕವೇ ಸರ್ಕಾರ ಬೆಂಬಲ ಬೆಲೆ ಘೋಷಣೆ ಮತ್ತು ಖರೀದಿ ಕೇಂದ್ರ ಆರಂಭಿಸುತ್ತಿದೆ. ಇದರಿಂದ ವ್ಯಾಪಾರಿಗಳಿಗೆ ಅನೂಕುಲವಾಗುತ್ತಿದೆ ಎಂದು ಆರೋಪಿಸಿದರು.
ಎರಡು ದಿನಗಳಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಖರೀದಿ ಕೇಂದ್ರ ಆರಂಭಿಸುವ ಮೂಲಕ ರೈತರಿಗೆ ಸಹಕಾರ ನೀಡಲು ಮುಂದಾಗಬೇಕು. ಇಲ್ಲವಾದಲ್ಲಿ ರಸ್ತೆಗಿಳಿದು ತಾಲೂಕಿನಲ್ಲಿ ರೈತ ಸಂಘಟನೆಯಿಂದ ಉಗ್ರವಾದ ರೀತಿಯಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹಣಮಂತರಾವ ಬೋರಾಳ, ರಾಜಕುಮಾರ ಬಿರಾದಾರ, ವೈಜಿನಾಥ ಶೆಂಬೆಳ್ಳಿ, ಶಿವರಾಜ ಖಾನಾಪುರ, ರಾಮ ಡೋಂಗರಗಾಂವ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.