ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕನಿಷ್ಠ 18 ಸಾವಿರ ರೂ. ಮಾಸಿಕ ವೇತನ ನಿಗದಿಪಡಿಸಬೇಕು ಹಾಗೂ ಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಬುಧವಾರ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಆಶಾ ಕಾರ್ಯಕರ್ತೆಯರು, ಜನತೆಯ ಮಧ್ಯೆ ಇದ್ದು ಆರೋಗ್ಯ ಇಲಾಖೆಯ ಸೇವೆಗಳನ್ನು ಜನರಿಗೆ ತಲುಪಿಸುವ ನಮಗೆ ದುಡಿಮೆಗೆ ತಕ್ಕ ವೇತನ ಸಿಗುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಾವಿರಾರು ರೂ. ಪ್ರೋತ್ಸಾಹ ಧನ ಬಾಕಿ ಇದೆ. ಬಹುತೇಕ ಆಶಾ ಕಾರ್ಯ ಕರ್ತೆಯರು ತಮ್ಮ ದುಡಿಮೆಯಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಹೀಗಾಗಿ ನಗರದಲ್ಲಿ ಕನಿಷ್ಠ ವೇತನವನ್ನು 18 ಸಾವಿರ ರೂ.ಗೆ ಹೆಚ್ಚಳ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಸಲಹೆಗಾರ್ತಿ ಟಿ.ಸಿ.ರಮಾ ಮಾತನಾಡಿ, ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 3,500 ರೂ. ವೇತನ ನಿಗದಿಪಡಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಮೇ ತಿಂಗಳಿನಿಂದ ಸಂಬಳ ನೀಡಿಲ್ಲ. ಆಶಾ ಕಾರ್ಯ ಕರ್ತೆಯರು ನೀಡಿರುವ ಬ್ಯಾಂಕ್ ಖಾತೆ ವಿವರದಲ್ಲಿ ಲೋಪಗಳಿವೆ ಎಂಬುದಾಗಿ ಪಾಲಿಕೆ ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ. ಸರ್ಕಾರದ ನೂತನ ವೇತನ ಪಾವತಿ ವಿಧಾನ ಖಜಾನೆ-2ರಿಂದ ವೇತನ ನೀಡಬೇಕಿರುವುದರಿಂದ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ದೂರಿದರು.
ಕೇಂದ್ರ ಸರ್ಕಾರ ಪ್ರೋತ್ಸಾಹ ಧನ ನೀಡುವ “ಆಶಾ ಸಾಫ್ಟ್’ ವೇತನ ಮಾದರಿಯಿಂದಾಗಿ ಆಶಾ ಕಾರ್ಯ ಕರ್ತೆಯರಿಗೆ ಕಳೆದ ಎರಡೂವರೆ ವರ್ಷದಿಂದ ಸಾವಿರಾರು ರೂ. ವೇತನ ಕೈತಪ್ಪಿದೆ. ಸರಿಯಾಗಿ ವೇತನ ನೀಡದಿದ್ದರೂ ವಾರ್ಷಿಕ ಕಾರ್ಯಕ್ರಮಗಳ ಜತೆಗೆ ಆಗಾಗ್ಗೆ ನೀಡುವ ನಿರ್ದೇಶನಗಳನ್ನು ಪಾಲಿಸುತ್ತಾ ಆರೋಗ್ಯ ಸೇವೆ ಸಲ್ಲಿಸಬೇಕಿದೆ ಎಂದರು.
ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಶಾ ಕಾರ್ಯಕರ್ತೆಯರಿಗೆ ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಪ್ರತಿ ತಿಂಗಳು ನಿಗದಿತ ದಿನಾಂಕದಂದು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಗೌರವ ಧನ ನೀಡ ಬೇಕು. ಆಶಾ ಸಾಫ್ಟ್ ನೊಂದಣಿಗಿರುವ ಸಮಸ್ಯೆಗಳನ್ನು ಪರಿಹರಿಸಿ, ಆಶಾ ಕಾರ್ಯಕರ್ತೆಯರು ನಿರ್ವಹಿಸಿದ ಎಲ್ಲ ಕೆಲಸಗಳಿಗೆ ಸಂಪೂರ್ಣ ಪ್ರೋತ್ಸಾಹಧನ ನೀಡಬೇಕು ಎಂದು ಒತ್ತಾಯಿಸಿದರು.
ಬಹುತೇಕ ಕಡೆ ತಿಂಗಳಿಗೆ ಎರಡು ಬಾರಿ ಲಾರ್ವ ಸರ್ವೇ, ಆಗಾಗ ಕುಷ್ಠರೋಗ ಸರ್ವೇ, ಐಯೋಡಿನ್ ರೀತಿಯ ನಾನಾ ಸರ್ವೇ ಕೈಗೊಂಡಾಗ ಪ್ರೋತ್ಸಾಹಧನ ನೀಡುತ್ತಿಲ್ಲ. ಹೀಗಾಗಿ ಪ್ರತಿ ದಿನದ ಸರ್ವೇಗೆ ಕನಿಷ್ಠ 200 ರೂ. ನಿಗದಿಪಡಿಸಬೇಕು. ಈಗಾಗಲೇ ಇರುವ ಆದೇಶದಂತೆ ಆಶಾ ಕಾರ್ಯಕರ್ತೆಯರಿಗೆ ಜಿಲ್ಲಾ, ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಜತೆಗೆ ವಿಶ್ರಾಂತಿ ಕೊಠಡಿ ಒದಗಿಸಬೇಕೆಂದು ಆಗ್ರಹಿಸಿದರು.