Advertisement

ಬಿಪಿಎಲ್‌ ಚೀಟಿ ರದ್ದತಿ ಖಂಡಿಸಿ ಪ್ರತಿಭಟನೆ

11:59 AM Nov 13, 2019 | Team Udayavani |

ಬೆಳಗಾವಿ: ಗ್ರಾಮ ಪಂಚಾಯತ್‌ ಮತ್ತು ಅಂಗನವಾಡಿ ನೌಕರರ ಬಿಪಿಎಲ್‌ ಪಡಿತರ ಚೀಟಿ ರದ್ದು ಪಡಿಸಿರುವುದನ್ನು ಖಂಡಿಸಿ ಅಂಗನವಾಡಿ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಅಂಗನವಾಡಿ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸುಮಾರು 12 ಸಾವಿರ ಆಂಗನವಾಡಿ ಕಾರ್ಯಕರ್ತರು ಹಾಗೂ 32,300 ಗ್ರಾಮ ಪಂಚಾಯತ್‌ ನೌಕರರು ಕೆಲಸ ಮಾಡುತ್ತಿದ್ದು, ಇವರೆಲ್ಲರೂ ಬಿಪಿಎಲ್‌ ಕಾರ್ಡ್‌ ಹೊಂದಿದ್ದಾರೆ. ಆದರೆ ಸರಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಇತ್ತೀಚೆಗೆ ಈ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡುತ್ತಿದೆ. ಇದರಿಂದ ಬಹಳ ತೊಂದರೆ ಉಂಟಾಗಿದ್ದು ಕೂಡಲೇ ಇದನ್ನು ಕೈಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಅಧ್ಯಕ್ಷ ವಿ.ಪಿ. ಕುಲಕರ್ಣಿ, ಸರ್ಕಾರಗಳು ತಿನ್ನುವ ಅನ್ನವನ್ನು ಕಸಿದುಕೊಳ್ಳುತ್ತಿವೆ. ಒಂದು ಕಡೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾರೂ ಊಟವಿಲ್ಲದೇ ಮಲಗಬಾರದು ಎಂದು ಹೇಳುತ್ತಾರೆ. ಆದರೆ ಇನ್ನೊಂದು ಕಡೆ ಬಡವರ ಬಿಪಿಎಲ್‌ ಕಾರ್ಡ್‌ ರದ್ದು ಮಾಡುತ್ತಿದ್ದಾರೆ. ಇದಾವ ನ್ಯಾಯ ಎಂದು ಪ್ರಶ್ನಿಸಿದರು.

ಅಂಗನವಾಡಿ ನೌಕರರು ಗೌರವ ಧನದ ಮೇಲೆ ದುಡಿಯುತ್ತಿದ್ದಾರೆ, ರಾಜ್ಯ ಸರಕಾರ ಇವರಿಗೆ 5000 ರೂ. ಗೌರವ ಧನ ನೀಡುತ್ತಿದೆ. ಕೇಂದ್ರ ಸರ್ಕಾರದಿಂದ ಮೂರು ಸಾವಿರ ಸಿಗುತ್ತಿದೆ. ಈ ಎರಡೂ ವೇತನಗಳು ಸರಿಯಾದ ಸಮಯಕ್ಕೆ ಇವರಿಗೆ ದೊರೆಯುತ್ತಿಲ್ಲ. ಮೇಲಾಗಿ ಇವರು ಕಾಯಂ ನೌಕರರೂ ಅಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರ ಬಿಪಿಎಲ್‌ ಕಾರ್ಡ್‌ ಸಹ ರದ್ದುಮಾಡಿದರೆ ಜೀವನಕ್ಕೆ ಏನು ಮಾಡಬೇಕು. ಇದು ಸರಕಾರಕ್ಕೆ ತಿಳಿಯುವುದಿಲ್ಲವೇ ಎಂದು ಖಾರವಾಗಿ ಪ್ರಶ್ನೆ ಮಾಡಿದರು. 2006ರಲ್ಲಿ ಆರೋಗ್ಯ ಭದ್ರತಾ ಕಾನೂನು ಬಂದಿದೆ. ಬಡವರು ಬಿಪಿಎಲ್‌ ಕಾರ್ಡಿನ ಮೂಲಕ ಬದುಕುತ್ತಿದ್ದಾರೆ. ಹೀಗಿರುವಾಗ ಸರ್ಕಾರ ಗ್ರಾಮ ಪಂಚಾಯತ್‌ ಹಾಗೂ ಅಂಗನವಾಡಿ ನೌಕರರ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಮಾಡಿ ಅವರು ಬೀದಿಗೆ ಬರುವಂತೆ ಮಾಡಿದ್ದಾರೆ. ಬಡವರ ಬಗ್ಗೆ ಕಾಳಜಿ ಇಲ್ಲದೇ ತುಘಲಕ್‌ ದರ್ಬಾರ್‌ ನಡೆಸುತ್ತಿದೆ. ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ಗ್ರಾಮ ಪಂಚಾಯತ್‌ ನೌಕರರಿಗೆ ಕನಿಷ್ಠ ವೇತನ ನಿಗದಿ ಮಾಡಿ ಆದೇಶ ಹೊರಡಿಸಿದ್ದರೂ ಬಹುತೇಕ ಕಡೆಗಳಲ್ಲಿ ಕನಿಷ್ಠ ವೇತನ ಜಾರಿಯಾಗಿಲ್ಲ. ಈಗ 10 ಸಾವಿರದಿಂದ 13 ಸಾವಿರ ವೇತನ ಇದೆ. ಆದರೆ ಒಂದೊಂದು ಕಡೆ 5 ರಿಂದ 6 ಸಾವಿರ, 2 ರಿಂದ 3 ಸಾವಿರಕ್ಕೆ ದುಡಿಸಿಕೊಳ್ಳುತ್ತಿದ್ದಾರೆ. ಈ ಕಡಿಮೆ ವೇತನ ಸಹ ಕಳೆದ ಹಲವಾರು ತಿಂಗಳಿಂದ ಬಂದಿಲ್ಲ. ಈಗ ಇವರ ಬಿಪಿಎಲ್‌ ಕಾರ್ಡ್‌ ಸಹ ರದ್ದು ಮಾಡಿರುವುದರಿಂದ ಬದುಕು ಅತಂತ್ರವಾಗಿದೆ. ಕಾರಣ ಸರಕಾರ ಕೂಡಲೇ ರದ್ದು ಕ್ರಮ ಕೈ ಬಿಡಬೇಕು. ಅಂಗನವಾಡಿ ಕಾರ್ಯಕರ್ತರ ಹುದ್ದೆಗಳನ್ನು ಕಾಯಂಗೊಳಿಸಿ ಅವರಿಗೆ ಸೇವಾ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.

ಬಿಪಿಎಲ್‌ ಕಾರ್ಡ್‌ಗಾಗಿ ಸರಕಾರ ಆದಾಯ ಮಿತಿಯನ್ನು 1.20 ಲಕ್ಷ ಆದಾಯ ನಿಗದಿಮಾಡಿದೆ. ಆದರೆ ಈ ಆದಾಯದಲ್ಲಿ ಒಂದು ಕುಟುಂಬ ಒಂದು ವರ್ಷ ನೆಮ್ಮದಿಯಿಂದ ಬದುಕಿರಲು ಸಾಧ್ಯವಿಲ್ಲ. ಆದ್ದರಿಂದ ಆದಾಯ ಮಿತಿಯನ್ನು 2.50 ಲಕ್ಷಕ್ಕೆ ಹೆಚ್ಚಿಸಬೇಕು. ಸರಕಾರದ ಮುಂದಿನ ಅದೇಶವಾಗುವವರೆಗೆ ಅಂಗನವಾಡಿ ಹಾಗೂ ಗ್ರಾಮ ಪಂಚಾಯತ ನೌಕರರ ಬಿಪಿಎಲ್‌ ಕಾರ್ಡ್‌ ರದ್ದುಮಾಡಬಾರದು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಗೌರವಾಧ್ಯಕ್ಷ ಸಿ.ಎ.ಖರಾಡೆ, ಪ್ರಧಾನ ಕಾರ್ಯದರ್ಶಿ ಜಿ.ಎಂ. ಜೈನೆಖಾನ್‌ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next