ಹರಪನಹಳ್ಳಿ: ತಾಲೂಕಿನ ಅರಸೀಕೆರೆಯಿಂದ ಕಂಚಿಕೆರೆ ರಸ್ತೆ ದುರಸ್ತಿಗೆ ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಅರಸೀಕೆರೆ ಗ್ರಾಮದ ಹೊರ ಹೊಲಯದ ತೌಡೂರು ರಸ್ತೆ ಪೆಟ್ರೋಲ್ ಬಂಕ್ ವೃತ್ತದ ಬಳಿ ರಸ್ತೆತಡೆ ನಡೆಸಿದರು.
ಭಾರತ ಕಮ್ಯುನಿಸ್ಟ್ ಪಕ್ಷ, ರಾಜ್ಯ ರೈತ ಸಂಘ-ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು 2 ಗಂಟೆಗೂ ಅಧಿಕ ಸಮಯ ರಸ್ತೆ ತಡೆ ನಡೆಸಿ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಕೆಸರು ಗದ್ದೆಯಾಗಿರುವ ರಸ್ತೆಯಲ್ಲಿ ಮೆಕ್ಕೆಜೋಳ-ರಾಗಿ ಸಸಿ ನೆಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ವಾಹನ ಸವಾರರು ನೂರಾರು ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆಗೆ ಬೆಂಬಲಿಸಿದರು.
ಅರಸೀಕೆರೆಯಿಂದ ಕಂಚಿಕೆರೆ ಮಾರ್ಗದ ರಸ್ತೆ ರಾಜ್ಯ ಮುಖ್ಯ ಹೆದ್ದಾರಿಯಾಗಿದ್ದು, ಸುಮಾರು30 ವರ್ಷಗಳ ಹಿಂದೆ ನಿರ್ಮಾಣವಾಗಿದೆ. ಇದೀಗ ಹದಗೆಟ್ಟು ಮೊಳಕಾಲು ಉದ್ದ ಗುಂಡಿಗಳಿಂದ ಕೂಡಿದ್ದು ಕೆಸರುಗದ್ದೆಯಂತಾಗಿದೆ. ರಸ್ತೆಯಲ್ಲಿ ಸಂಚರಿಸುವವರಿಗೆ ಜೀವಕ್ಕೆ ಸಂಚಕಾರ ಎದುರಾಗಿದೆ. ಸಾರ್ವಜನಿಕರು ಈ ದಾರಿಯಲ್ಲಿಬಿದ್ದು ಮೂಳೆಮುರಿತದಂತಹ ಸಾಕಷ್ಟು ನೋವುಗಳನ್ನು ಅನುಭವಿಸಿದ್ದಾರೆ. ಮುಖ್ಯವಾಗಿ ಅಂಬ್ಯುಲೆನ್ಸ್ ವಾಹನಗಳು ತುರ್ತು ಚಿಕಿತ್ಸೆಗೆ, ಗರ್ಭಿಣಿಯರನ್ನು, ರೋಗಿಗಳನ್ನು ದಾವಣಗೆರೆಗೆ ಇದೇ ರಸ್ತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಈ ಹಿಂದೆ ಹಲವು ಬಾರಿ ಹೋರಾಟ ನಡೆಸಿ ಮನವಿ ಮಾಡಿದ್ದರೂ ಸಂಬಂಧಿಸಿದ ಕಿವುಡ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷéವಹಿಸಿ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ಕೂಡಲೇ ರಸ್ತೆ ಕಾಮಗಾರಿ ಅರಂಭಿಸುವಂತೆ ಆಗ್ರಹಿಸಿದರು.
ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಅಧಿಕಾರಿಗಳು ಜೆಸಿಬಿ ತರಿಸಿ ಮಣ್ಣು ಹಾಕಿಸುವ ಕಾರ್ಯಕ್ಕೆ ಮುಂದಾದರು. ಸ್ಥಳಕ್ಕೆ ಆಗಮಿಸಿದ ಉಪತಹಶೀಲ್ದಾರ್ ಫಾತಿಮಾ, ಇಂಜಿನಿಯರ್ ಮಹೇಶನಾಯ್ಕ ಅವರ ಮುಖಾಂತರ ಲೋಕೋಪಯೋಗಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದರು.
ಸಿಪಿಐ ತಾಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್, ಹೊಸಳ್ಳಿ ಮಲ್ಲೇಶ, ಬೂದಿಹಾಳ ಸಿದ್ದೇಶಪ್ಪ, ಕಬ್ಬಳ್ಳಿ ಮೈಲಪ್ಪ, ಕಬ್ಬಳ್ಳಿ ಬಸವರಾಜ್, ಮಾದಿಹಳ್ಳಿ ಮಂಜಪ್ಪ, ಕರಡಿದುರ್ಗ ಚೌಡಪ್ಪ, ತೌಡೂರು ಕೊಟ್ರಯ್ಯ, ಪುಣಭಗಟ್ಟಿ ಮಂಜಪ್ಪ, ಕರಿಬಸಪ್ಪ ಸಿದ್ದಯ್ಯನಕೋಟೆ, ಗೊಲ್ಲರಹಟ್ಟಿ ರಮೇಶ್, ಬಳಿಗನೂರು ಕೊಟ್ರಯ್ಯ, ಗುಡಿಹಳ್ಳಿ ಬಸವರಾಜ್, ಎಂ.ಮೂಗಪ್ಪ ಬೂದಿಹಾಳ್, ಟ್ರಾಕ್ಸ್ ಮಂಜುನಾಥ, ಕಂಚಿಕೆರೆ ಸುರೇಶ, ಪ್ರಭುಗೌಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ರಸ್ತೆ ದುರಸ್ತಿಗೆ ಒತ್ತಾ ಯಿಸಿ ಚಪ್ಪಲಿಯಲ್ಲಿ ಹೊಡೆದುಕೊಂಡ :
ಹರಪನಹಳ್ಳಿ: ಗುಂಡಿ ಬಿದ್ದಿರುವ ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಹೋರಾಟಗಾರನೊಬ್ಬ ತನ್ನ ಚಪ್ಪಲಿಯಲ್ಲಿ ತಾನೇ ಹೊಡೆದುಕೊಂಡು ವಿನೂತನವಾಗಿ ಪ್ರತಿಭಟಿಸಿದ ಘಟನೆ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ತಾಲೂಕಿನ ಅರಸೀಕೆರೆಯಿಂದ ಕಂಚಿಕೆರೆ ರಸ್ತೆ ದುರಸ್ತಿಗೆ ಒತ್ತಾಯಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಎಂಜಿನಿಯರ್, ಮಳೆಗಾಲದ ನಂತರ ಕಾಮಗಾರಿ ನಡೆಸಲಾಗುವುದು ಎನ್ನುತ್ತಿದ್ದಂತೆಯೇಪ್ರತಿಭಟನಾಕಾರ ಸತ್ತೂರು ಮಹಾದೇವಪ್ಪ ಕೆಸರುಗದ್ದೆಯಂತಾದ ರಸ್ತೆ ಗುಂಡಿಯಲ್ಲಿ ಬಿದ್ದು ಹೊರಳಾಡುತ್ತಾ ರಸ್ತೆ ನಿರ್ಮಾಣ ಮಾಡಿ, ಇಲ್ಲವೇ ಸಾಯಲು ಬಿಡಿ ಎಂದು ಕೂಗುತ್ತಾ ಆತ್ಮಹತ್ಯೆಬೆದರಿಕೆಯೊಡ್ಡಿದ್ದಾರೆ. ಅಲ್ಲದೇ ತನ್ನ ಚಪ್ಪಲಿಯಿಂದ ತಾನೇ ತಲೆಗೆ ಬಡಿದುಕೊಳ್ಳುತ್ತಾ ಕುತ್ತಿಗೆಗೆ ಶಾಲು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಂತರ ಹೋರಾಟಗಾರರು ಸತ್ತೂರು ಮಹಾದೇವಪ್ಪ ಅವರನ್ನು ಮನವೊಲಿಸಿದರು.