ದಾವಣಗೆರೆ: ಕಾರ್ಮಿಕ ಕಾನೂನುಗಳಲ್ಲಿ ಕಾರ್ಮಿಕ ವಿರೋಧಿ ಬದಲಾವಣೆ, 178 ರೂಪಾಯಿ ಕನಿಷ್ಟ ವೇತನ ಪ್ರಕಟಣೆ ಒಳಗೊಂಡಂತೆ ವಿವಿಧ ಕಾರ್ಮಿಕ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಸೋಮವಾರ ಕರ್ನಾಟಕ ಶ್ರಮಿಕ ಶಕ್ತಿ, ನೆರಳು ಬೀಡಿ ಕಾರ್ಮಿಕರ ಯೂನಿಯನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕೋರ್ಟ್ ವೃತ್ತದ ಪೂಜಾ ಹೋಟೆಲ್‌ನಿಂದ ಸಹಾಯಕ ಕಾರ್ಮಿಕರ ಆಯುಕ್ತರ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಭಾರತದ ಕಾರ್ಮಿಕ ವರ್ಗದ ಮೇಲೆ ಅತ್ಯಂತ ಅಪಾಯಕಾರಿ ದಾಳಿ ನಡೆಯುತ್ತಿದೆ. ಕಾರ್ಮಿಕ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ ಜಾರಿಗೆ ಬಂದಿದ್ದ ಕಾರ್ಮಿಕ ಕಾನೂನುಗಳನ್ನು ಕಿತ್ತು ಹಾಕಿರುವ ಕೇಂದ್ರ ಸರ್ಕಾರ 44 ಕಾರ್ಮಿಕ ಕಾಯ್ದೆಗಳನ್ನ 4 ಲೇಬರ್ ಕೋಡ್‌ಗಳಾಗಿ ಬದಲಾಯಿಸಲು ಮುಂದಾಗಿರುವುದು ಆತ್ಯಂತ ಖಂಡನೀಯ ಎಂದು ಪ್ರತಿಭಟನಾಕಾರರು ದೂರಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವೇತನಗಳ ಸಂಹಿತೆ, ಕೈಗಾರಿಕಾ ಸಂಬಂಧ ಸಂಹಿತೆ, ಸಾಮಾಜಿಕ ಭದ್ರತೆ, ಕಾರ್ಮಿಕ ಕಲ್ಯಾಣ ಕುರಿತ ಸಂಹಿತೆ ಅಲ್ಲದೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗಾಗಿ ಮಾಡಿದ ಬಿಸಿಡಬ್ಲೂ ಕಾಯ್ದೆ-1961 ರದ್ದುಪಡಿಸುವ ಮೂಲಕ ಶ್ರಮಿಕ ವರ್ಗದವರಿಗೆ ಸಮಸ್ಯೆ ಉಂಟು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಸಿಡಬ್ಲೂ ಮಂಡಳಿ ಮುಚ್ಚುತ್ತಿರುವ ನೇರ ಪರಿಣಾಮ ಕಾರ್ಮಿಕರ ಮೇಲೆ ಆಗುತ್ತಿದೆ. ದೇಶದ 4 ಕೋಟಿಗೂ ಅಧಿಕ ಕಾರ್ಮಿಕರ ನೋಂದಣಿಯೇ ರದ್ದಾಗಲಿದೆ.
ಕಾರ್ಮಿಕರು, ಬಡವರ ಪರ ಪುಖಾಂನುಪುಂಖವಾಗಿ ಮಾತನಾಡುವ ಕೇಂದ್ರ ಸರ್ಕಾರ ದೈನಂದಿನ ರಾಷ್ಟ್ರೀಯ ಕನಿಷ್ಟ ವೇತನವನ್ನು 178 ರೂಪಾಯಿಗೆ ನಿಗದಿ ಮಾಡಿರುವುದು ನಾಚಿಕೆಗೇಡಿನ ವಿಚಾರ. ಮೋದಿ ಸರ್ಕಾರ ಹೇಳುತ್ತಿರುವ 5 ಟ್ರಿಲಿಯನ್ ಆರ್ಥಿಕತೆ ಮತ್ತು ಅಭಿವೃದ್ಧಿಯ ಮಾತುಗಳು ಕಾರ್ಮಿಕರ ಪಾಲಿಗೆ ಮಾಡುತ್ತಿರುವ ಅತಿ ದೊಡ್ಡ ವಂಚನೆ ಎಂದು ದೂರಿದರು. ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾಖಾನಂ, ಎಂ. ಕರಿಬಸಪ್ಪ, ಸತೀಶ್ ಅರವಿಂದ್, ಆದಿಲ್‌ಖಾನ್, ಶಿರಿನ್ ಬಾನು, ಹಸೀನಾಬಾನು, ನಾಜಿಯಾಬಾನು, ಸಬ್ರಿನ್‌ತಾಜ್ ಇತರರು ಇದ್ದರು.