ಆಳಂದ: ತಾಲೂಕಿನ ಮಾಡಿಯಾಳ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ರಸ್ತೆ ದುರಸ್ಥಿ ಸೇರಿದಂತೆ ಪ್ರಮುಖ ಬೇಡಿಕೆಗೆ ಮುಂದಿಟ್ಟುಕೊಂಡು ಸಾರ್ವಜನಿಕರು ಬುಧವಾರ ರಸ್ತೆ ತಡೆ ಪ್ರತಿಭಟನಾ ಧರಣಿ ನಡೆಸಿದರು.
ಮಾಡಿಯಾಳ ಗ್ರಾಮದ ಔರಾದ ಸದಾಶಿವಗಡ ರಾಜ್ಯ ಹೆದ್ದಾರಿ ಮೇಲೆ ವಿವಿಧ ಗ್ರಾಮಗಳ ಗ್ರಾಮಸ್ಥರಿಂದ ನಡೆದ ಪ್ರತಿಭಟನೆಯಲ್ಲಿ ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ ಭಾಗವಹಿಸಿ ಮಾತನಾಡಿದರು.
ಮಾಡಿಯಾಳ ವಲಯದ ಅನೇಕ ಗ್ರಾಮ ಸಂಪರ್ಕ ರಸ್ತೆಗಳ ತೀರಾ ಹದಗೆಟ್ಟಿದ್ದು, ಅಧಿಕಾರಿಗಳು ಕೂಡಲೇ ದುರಸ್ತಿ ಮಾಡಿ ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಪ್ಯಾಟಿ ಒತ್ತಾಯಿಸಿದರು.
ಔರಾದ ಸದಾಶಿವಗಡ ರಾಜ್ಯ ಹೆದ್ದಾರಿಯಲ್ಲಿ ಬರುವ ದೇವಂತಗಿ, ಮಾಡಿಯಾಳ, ಕುಲಾಲಿ ವರೆಗಿನ ರಸ್ತೆಯಲ್ಲಿ ಮೊದಲು ಬಸ್, ಜೀಪ್, ಟಂಟಂ, ದ್ವಿಚಕ್ರ ವಾಹನಗಳು ಹೋಗುತ್ತಿದ್ದವು. ಆದರೆ, ಈಗ ಜನರು ನಡೆಯಲು ಯೋಗ್ಯವಿಲ್ಲದ ರಾಜ್ಯ ಹೆದ್ದಾರಿಯಾಗಿದೆ. ಅಲ್ಲದೇ ಮಾಡಿಯಾಳದಿಂದ ನಿಂಬರ್ಗಾವರೆಗೆ ರಸ್ತೆಯೂ ಸಂಪೂರ್ಣವಾಗಿ ಹಾಳಾಗಿದೆ ಇದನ್ನು ದುರಸ್ತಿ ಮಾಡಬೇಕೆಂದು ಅವರು ಆಗ್ರಹಿಸಿದರು.
ಮುಖಂಡ ಚನ್ನಮಲೇಶ್ವರ ಬಿರಾದಾರ, ಭೀಮಾಶಂಕರ ಖೊಂಬಿನ ಮಾತನಾಡಿದರು. ಮುಖಂಡ ಕಲ್ಮೇಶ ಪಾಟೀಲ, ಬಾಬು ಗೊಬ್ಬರ, ಲಕ್ಷ್ಮಣ ಸೂಗುರ, ಶ್ರೀಕಾಂತ ಕೌಲಗಿ, ಸಂಗಣ್ಣಾ ಮುದ್ದಡಗಿ, ಬಿ.ಜಿ.ಮಡ್ಡಿತೋಟ್, ಪ್ರಭಾಕರ ಮಡ್ಡಿತೋಟ್, ರೇವಣಸಿದ್ಧ ಶ್ರೀಗಣಿ, ರಮೇಶ ಕಲಶಟ್ಟಿ, ಸುಭಾಷ ಪೊಲೀಸ್ ಪಾಟೀಲ, ರಮೇಶ ರಾಠೊಡ, ಸಿದ್ಧರಾಮ ಆಳಂದ, ಶಾಮರಾವ ಸಿಂಗೆ, ಈರಣ್ಣಾ ನಿಂಬಾಳ, ಪ್ರಭಾಕರ ಬಿರಾದಾರ, ಬಸವರಾಜ ಕಲಶೆಟ್ಟಿ, ಶಿವಾನಂದ, ಶಂಕರ ಬಿರಾದಾರ, ಬಸವರಾಜ ಕೌಲಗಿ, ಶಿವಯೋಗಿ ಕೌಲಗಿ, ನಿಂಗಪ್ಪ ನಾಶಿ, ಸುಭಾಷ ಕಂಬಾರ, ಭವಾನೇಪ್ಪ ಕೌಲಗಿ, ಕಲ್ಯಾಣಿ ಶ್ರೀಗಣಿ ಹಾಗೂ ವಿವಿಧ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನಿಂಬರಗಾ ನಾಡ ತಹಶೀಲ್ದಾರ್ ಮಹೇಶ, ಕೆಕೆಆರ್‌ಟಿಸಿ ಘಟಕ ವ್ಯವಸ್ಥಾಪಕ ಜೆಟ್ಟೆಪ್ಪ ದೊಡ್ಡಮನಿ ಹಾಗೂ ಇನ್ನಿತರ ಇಲಾಖೆ ಸಿಬ್ಬಂದಿ ಮನವಿ ಸ್ವೀಕರಿಸಿದರು. ಸುಮಾರು ನಾಲ್ಕು ತಾಸು ರಸ್ತೆ ತಡೆಯಿಂದ ಆಳಂದ ಕಲಬುರಗಿ, ಅಕ್ಕಲಕೋಟ, ಸೊಲ್ಲಾಪುರ ಕಡೆ ಹೋಗುವ ಜನರಿಗೆ ತೊಂದರೆಯಾಯಿತು.