Advertisement

ಕೆರೆ ಸಂರಕ್ಷಿಸಲು ಒತ್ತಾಯಿಸಿ ಪ್ರತಿಭಟನೆ

12:41 PM Aug 20, 2018 | Team Udayavani |

ಬೆಂಗಳೂರು: ಸುತ್ತಮುತ್ತಲ ಕಾರ್ಖಾನೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳಿಂದ ಹರಿದು ಬರುತ್ತಿರುವ ತ್ಯಾಜ್ಯ ನೀರಿನಿಂದ ಪುಟ್ಟೇನಹಳ್ಳಿ ಕೆರೆ ಮಾಲಿನ್ಯವಾಗುತ್ತಿದ್ದು, ಸರ್ಕಾರ ಅಗತ್ಯ ಕ್ರಮ ಕೈಗೊಂಡು ಕೆರೆ ರಕ್ಷಿಸಬೇಕು ಎಂದು ಒತ್ತಾಯಿಸಿ ಪುಟ್ಟೇನಹಳ್ಳಿ ಕೆರೆ ಮತ್ತು ಪಕ್ಷಿ ಸಂರಕ್ಷಣಾ ಟ್ರಸ್ಟ್‌ ಭಾನುವಾರ ಪ್ರತಿಭಟನೆ ನಡೆಸಿತು.

Advertisement

ಟ್ರಸ್ಟ್‌ ಮುಂದಾಳತ್ವದಲ್ಲಿ  ಸ್ಥಳೀಯರು, ವಿದ್ಯಾರ್ಥಿಗಳು ಯಲಹಂಕ-ದೊಡ್ಡಬಳ್ಳಾಪುರ ಮುಖ್ಯರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಕೆರೆ ಉಳಿಸಿ, ಪರಿಸರ ಸಂರಕ್ಷಿಸಿ ಘೋಷಣೆ ಕೂಗಿದರು. ಪ್ರತಿಭಟನಾನಿರತರನ್ನು ಉದ್ದೇಶಿಸಿ ಟ್ರಸ್ಟ್‌ನ ಸದಸ್ಯ ಟಿ.ಕೆ.ಪುಟ್ಟಸ್ವಾಮಿ ಮಾತನಾಡಿ, ಸುತ್ತಮುತ್ತಲಿನ ಪ್ರದೇಶದ ಅಪಾರ್ಟ್‌ಮೆಂಟ್‌ ಹಾಗೂ ಕಾರ್ಖಾನೆಗಳಿಂದ ಕೊಳಚೆ ನೀರು ಬಂದು ಕೆರೆಗೆ ಸೇರುತ್ತಿದೆ.

ಇದರಿಂದ ಕೆರೆ ತುಂಬಾ ತ್ಯಾಜ್ಯ ನೀರು ತುಂಬಿ ಕೆರೆ ಸಂಪೂರ್ಣ ಮಲಿನವಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳೀಯರು ಹಾಗೂ ಸಂಘ-ಸಂಸ್ಥೆಗಳ ಸದಸ್ಯರು ಬಿಬಿಎಂಪಿ, ಬೆಂಗಳೂರು ಜಲಮಂಡಳಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹಲವು ಬಾರಿ ಮನವಿ ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಆಶ್ವಾಸನೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಟ್ರಸ್ಟ್‌ನ ಮುಖ್ಯಸ್ಥ ಡಾ.ಸಂಗುನ್ನಿ ಮಾತನಾಡಿ, ಕೆರೆ ದಡದಲ್ಲಿರುವ ಜಲಮಂಡಳಿಯ ತ್ಯಾಜ್ಯ ಸಂಸ್ಕರಣಾ ಘಟಕ ದುರಸ್ಥಿಗೆ ಬಂದಿದ್ದು, ಕೊಳಚೆ ನೀರು ಸಂಸ್ಕರಣೆಯಾಗದೆ ನೇರವಾಗಿ ಕೆರೆ ಸೇರುತ್ತಿದೆ. ಹೀಗಾಗಿ, ಕೆರೆಗೆ ವಲಸೆ ಬರುವ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿದೆ. ಜತೆಗೆ ತ್ಯಾಜ್ಯ ನೀರು ಸುತ್ತಮುತ್ತಲ ಪ್ರದೇಶಗಳಲ್ಲಿ ಇಂಗಿ ಹೋಗಿ ಅಂತರ್ಜಲವೂ ಕಲುಷಿತಗೊಂಡು ಕೊಳವೆ ಬಾವಿಗಳಲ್ಲಿ ಮಲಿನ ನೀರು ಕಾಣಿಸಿಕೊಳ್ಳುತ್ತಿದೆ. ಹೀಗೆಯೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು ಎಂದರು.

ಪ್ರತಿಭಟನಾನಿರತರ ಮನವಿಯನ್ನು ಸ್ವೀಕರಿಸಿದ ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌, ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಕೆರೆಯ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಬಿಬಿಎಂಪಿ ಹಾಗೂ ಜಲಮಂಡಳಿಯ ಸಮನ್ವಯದ ಕೊರತೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಕೂಡಲೇ ಸಂಸ್ಕರಣಾ ಘಟಕವನ್ನು ದುರಸ್ಥಿಗೊಳಿಸಲು ಸರ್ಕಾರಕ್ಕೆ  ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next