Advertisement

ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಪ್ರತಿಭಟನೆ

07:33 PM Aug 17, 2022 | Team Udayavani |

ರಾಯಚೂರು: ಸಮಾಜ ಕಲ್ಯಾಣ ಇಲಾಖೆಯಡಿ ಅಂಬೇಡ್ಕರ್‌ ಹಾಗೂ ಎಸ್‌ಟಿ ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಮಂಗಳವಾರ ಡಿಸಿ ಕಚೇರಿ ಎದುರು ರಾಜ್ಯ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ (ಎಐಯುಟಿಯುಸಿ ಸಂಯೋಜಿತ) ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರತಿಭಟನೆ ನಡೆಸಿದರು.

Advertisement

ಈ ಕುರಿತು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಜಿಲ್ಲೆಯ ಅಂಬೇಡ್ಕರ್‌ ವಸತಿ ಹಾಗೂ ಎಸ್‌ಟಿ ವಿದ್ಯಾರ್ಥಿ ನಿಲಯದಲ್ಲಿ ವಿವಿಧ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಕಳೆದ ಐದು ತಿಂಗಳಿಂದ ವೇತನ ನೀಡಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಸಮಸ್ಯೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕನಿಷ್ಟ ವೇತನ ಕಾಯ್ದೆ ಹಾಗೂ ವೇತನ ಪಾವತಿ ಕಾಯ್ದೆ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.

ವೇತನಕ್ಕೆ ಅನುಗುಣವಾಗಿ ಪಿಎಫ್‌ ಕೊಡುಗೆ ಕಾರ್ಮಿಕರ ಖಾತೆಗೆ ಜಮಾ ಮಾಡಬೇಕು, ಅದರ ಮಾಹಿತಿ ಕಾರ್ಮಿಕರಿಗೆ ಒದಗಿಸಬೇಕು ಹಾಗೂ ವಿದ್ಯಾರ್ಥಿಗಳ ಸಂಖ್ಯೆಗೆ ಅನುಪಾತಕ್ಕೆ ತಕ್ಕಂತೆ ಅಗತ್ಯವಿರುವಷ್ಟು ಇನ್ನೂ ಹೆಚ್ಚಿನ ಕಾರ್ಮಿಕರನ್ನು ಸೇವೆಗೆ ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಕಾರ್ಮಿಕರ ನೇಮಕಾತಿ ಪತ್ರ, ಗುರುತಿನ ಚೀಟಿ, ವೇತನ ಚೀಟಿ, ಸಮವಸ್ತ್ರ, ಏಫ್ರಾನ್‌, ಕೈಗವಸ, ತಲೆಗವಸ ಇತ್ಯಾದಿ ಸಲಕರಣೆ ನೀಡಬೇಕು ಹಾಗೂ 8 ಗಂಟೆಗಿಂತ ಹೆಚ್ಚು ಕೆಲಸಕ್ಕೆ ಓಟಿ ನಿಯಮದ ಪ್ರಕಾರ ಹೆಚ್ಚುವರಿ ಅವಧಿ ಗೆ ಎರಡುಪಟ್ಟು ವೇತನ ನೀಡಬೇಕು, ವಾರದ ರಜೆ ಬೋನಸ್‌ ಸೇರಿದಂತೆ ಇನ್ನಿತರ ಸೌಲಭ್ಯ ಖಾತ್ರಿಪಡಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಜಿಲ್ಲಾಧ್ಯಕ್ಷ ಮಹೇಶ ಸಿ, ಕಾರ್ಯದರ್ಶಿ ಉಮಾದೇವಿ, ಪದಾಧಿಕಾರಿಗಳಾದ ಅಣ್ಣಪ್ಪ, ಗಾಯಿತ್ರಿ, ಅರುಣಾ, ಅಮರಮ್ಮ, ಹಂಪಮ್ಮ, ಉಮಾದೇವಿ, ಹುಲಿಗೆಪ್ಪ, ಹನುಮಂತ, ಹಳದಯ್ಯ, ಮಹೇಶ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next