ಬೀಳಗಿ: ಕಾತರಕಿಯಲ್ಲಿ ಮದ್ಯದಂಗಡಿ ಬಂದ್ ಮಾಡುವಂತೆ ಆಗ್ರಹಿಸಿ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಶನಿವಾರ ಕಾತರಕಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಮುಖ್ಯ ರಸ್ತೆಯಲ್ಲಿಯೇ ಟೆಂಟ್ ಹಾಕಿಕೊಂಡು ಗ್ರಾಮಸ್ಥರು ಪ್ರತಿಭಟಿಸಿದರು. ಪ್ರತಿಭಟನೆಗೆ ಶಾಲಾ ಮಕ್ಕಳು ಕೂಡ ಸಾಥ್ ನೀಡಿದ್ದರು. ರಸ್ತೆ ತಡೆಯಿಂದಾಗಿ ಬೀಳಗಿ-ಅನಗವಾಡಿ ಮತ್ತು ಚಿಕ್ಕಾಲಗುಂಡಿ-ಮುಧೋಳ ಕಡೆಗೆ ಪ್ರಯಾಣ ಮಾಡುವ ವಾಹನ ಸವಾರರು ಪರದಾಡುವಂತಾಯಿತು. ಮದ್ಯದಂಗಡಿ ಮುಚ್ಚಿಸಬೇಕು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಪಟ್ಟು ಹಿಡಿದರು. ತಹಶೀಲ್ದಾರ್ ಉದಯ ಕುಂಬಾರ, ಸಿಪಿಐ ರವಿಚಂದ್ರ ಡಿ.ಬಿ., ಅಬಕಾರಿ, ಅಧಿಕಾರಿ ಆದಿತ್ಯ ನರಸಗೊಂಡ ಮದ್ಯ ಅಂಗಡಿ ಮುಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಮಹಿಳೆಯರ ಆಕ್ರೋಶ: ಗ್ರಾಮದ ಹೈಸ್ಕೂಲ್ ಹತ್ತಿರವೇ ಇರುವ ಮದ್ಯದಂಗಡಿಯಿಂದ ಕುಡುಕರ ಹಾವಳಿ ಹೆಚ್ಚಾಗಿದೆ ಎಂದು ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಗ್ರಾಮಸ್ಥರೆಲ್ಲರೂ ಸೇರಿ ಮದ್ಯದಂಗಡಿ ತೆರವುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಪರಿಣಾಮ, ಕಳೆದ ಮೂರು ವರ್ಷದಿಂದ ಮದ್ಯದಂಗಡಿ ಬಂದಾಗಿತ್ತು.
ಗ್ರಾಮದಲ್ಲಿಯೂ ಶಾಂತಿ ನೆಲೆಸಿತ್ತು. ಇದೀಗ ಕಳೆದ ನಾಲ್ಕು ದಿನಗಳಿಂದ ಮತ್ತೆ ಮದ್ಯದಂಗಡಿ ತನ್ನ ಕಾರ್ಯಚಟುವಟಿಕೆ ಆರಂಭಿಸಿರುವುದರಿಂದ ಗ್ರಾಮದ ಸ್ವಾಸ್ಥ ಹದಗೆಡುತ್ತಿದೆ. ಕೂಡಲೇ ಅಧಿಕಾರಿಗಳು ಮದ್ಯದಂಗಡಿ ಶಾಶ್ವತವಾಗಿ ಮುಚ್ಚಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.
ಗ್ರಾಪಂ ಅಧ್ಯಕ್ಷ ಬಸಪ್ಪ ಕೆರಕಲಮಟ್ಟಿ, ಗ್ರಾಪಂ ಸದಸ್ಯ ಬಸಪ್ಪ ಹೊಸಕೋಟಿ, ಎಸ್‌ಡಿಎಂಸಿ ಸದಸ್ಯೆ ಲಕ್ಷ್ಮೀ ಕೋಟಿ, ನೀಲವ್ವ ಕೆರಕಲಮಟ್ಟಿ, ಶಾಂತವ್ವ ಸಾವಕಾರ, ನೀಲವ್ವ ತೇಲಿ, ಗಂಗವ್ವ ಸುಳ್ಳದ, ಕಸ್ತೂರೆವ್ವ ಸುಳ್ಳದ, ಸುವರ್ಣ ಬಡಿಗೇರ ಇತರರು ಇದ್ದರು.