ಯಲಬುರ್ಗಾ: ಹಮಾಲಿ ಕಾರ್ಮಿಕರಿಗೆ ವಸತಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕ ಫೆಡರೇಶನ್ ವತಿಯಿಂದ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಫೆಡರೇಶನ್ ಅಧ್ಯಕ್ಷ ಮಲ್ಲಪ್ಪ ಉಂಗ್ರಾಣಿ ಮಾತನಾಡಿ, ಹಮಾಲಿ ಕಾರ್ಮಿಕರು ಅಸಂಘಟಿಕ ಕಾರ್ಮಿಕರಲ್ಲಿ ಅತ್ಯಂತ ಶ್ರಮದಾಯಕ ಕೆಲಸ ನಿರ್ವಹಿಸುವ ವ್ಯಾಪಾರ ವಹಿವಾಟಿನಲ್ಲಿ ಪ್ರಮುಖ ಪಾತ್ರ ವಹಿಸುವ ಶ್ರಮಜೀವಿಗಳು. ಭಾರವಾದ ಮೂಟೆ, ಸರಂಜಾಮುಗಳನ್ನು ಹೊತ್ತು ನಿತ್ಯದ ಹೊಟ್ಟೆ ತುಂಬಿಸಿಕೊಳ್ಳುವ ಕಾರ್ಯವನ್ನು ಮಾಡುತ್ತಿದ್ದೇವೆ. ಹಮಾಲಿ ಕಾರ್ಮಿಕರಿಗೆ ವಸತಿ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಹಲವಾರು ಬಾರಿ ಹೋರಾಟ ಮಾಡಿದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಸತಿ ರಹಿತ ಹಮಾಲಿ ಕಾರ್ಮಿಕರಿಗೆ ನಿವೇಶನ ನೀಡಬೇಕು. ವಿವಿಧ ನಿಗಮಗಳಿಂದ ಸುಲಭ ಸಾಲ ದೊರೆಯುವಂತಾಗಬೇಕು. ಕಾಯಕ ಯೋಜನೆಯಡಿ ನಿವೃತ್ತಿ ಪರಿಹಾರ, ಭವಿಷ್ಯನಿಧಿ ಯೋಜನೆ ಜಾರಿಗೊಳಿಸಬೇಕು. ಶ್ರಮಿಕ ಭವನ ನಿರ್ಮಾಣಕ್ಕೆ ಮುಂದಾಗುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕು ಎಂದರು.
ಪಟ್ಟಣದ ಕನಕದಾಸ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ವಿವಿಧ ವೃತ್ತಗಳ ಮೂಲಕ ಸಂಚರಿಸಿ ತಹಶೀಲ್ದಾರ್ ಕಚೇರಿಗೆ ತೆರಳಿತು.
ಗ್ರೇಡ್-2 ತಹಶೀಲ್ದಾರ್ ನಾಗಪ್ಪ ಸಜ್ಜನ ಮನವಿ ಪತ್ರ ಸ್ವೀಕರಿಸಿ, ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು ಶೀಘ್ರದಲ್ಲೇ ಮನವಿ ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು ಎಂದರು. ನಾಗಪ್ಪ ಬಾಚಲಾಪೂರ, ಕಲ್ಲಪ್ಪ ಬಂಗಾಳಿಗಿಡದ, ಅಮರಸಾಬ್ ಕಡಗದ. ಇಮಾಮ್ ಸಿನ್ನಿ, ಎಂ. ಸಿದ್ಧಪ್ಪ, ರಾಶೀದ ಖಾಜಿ ಇತರರು ಇದ್ದರು.