ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75 ಮರು ಡಾಂಬರೀಕರಣಕ್ಕೆ ಆಗ್ರಹಿಸಿ ವಿವಿಧ ಸಂಘಟನೆ ಗಳ ವತಿಯಿಂದ ನಡೆಸುತ್ತಿರುವ ಪ್ರತಿಭಟನೆ 3ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆ ಅಂಗವಾಗಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿರುವ ವಿವಿಧ ಅಪಘಾತಗಳಲ್ಲಿ ಮೃತಪಟ್ಟವರ ಸ್ಮರಣಾರ್ಥ ಹಾಲು ತುಪ್ಪ ಬಿಡುವ ಮುಖಾಂತರ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ತಾಪಂ ಸದಸ್ಯ ಯಡೆಹಳ್ಳಿ ಮಂಜುನಾಥ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 75ರ ದುರಸ್ತಿಗೆ 3 ದಿನ ಗಳಿಂದ ಪ್ರತಿಭಟನೆ ಮಾಡಲಾಗುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ 75 ರ ಪ್ರಾಧಿಕಾರದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಇದೇ ರೀತಿ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಸಹ ಸ್ಥಳಕ್ಕೆ ಬಂದಿಲ್ಲ. ಕೂಡಲೇ ಸ್ಥಳಕ್ಕಾಗಮಿಸಿ ಸ್ಪಷ್ಟ ಭರವಸೆ ನೀಡುವವರೆಗೂ ಪ್ರತಿಭಟನೆ ನಿಲ್ಲಿಸಲ್ಲ ಎಂದರು.
ಬಾಳ್ಳುಪೇಟೆ ಗ್ರಾಮದ ವರ್ತಕರು, ಕೆಲ ಗಂಟೆಗಳ ಕಾಲ ತಮ್ಮ ಅಂಗಡಿ ಮುಂಗಟ್ಟು ಬಂದ್ ಮಾಡುವುದರ ಮುಖಾಂತರ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಬರುವಂತೆ ಆಗ್ರಹಿಸಿ ಬಾಳ್ಳುಪೇಟೆ ವೃತ್ತದ ಬಳಿ ಮಧ್ಯಾಹ್ನ 1 ಗಂಟೆ ವೇಳೆ ರಸ್ತೆ ತಡೆ ಮಾಡಿದ್ದರಿಂದ ಹೆದ್ದಾರಿ ಎರಡು ಬದಿಯಲ್ಲಿ 3 ಕಿ.ಮೀಗೂ ಹೆಚ್ಚು ಸಂಚಾರ ಸಮಸ್ಯೆ ಆಗಿತ್ತು. ಈ
ವೇಳೆ ರಸ್ತೆಯಲ್ಲಿ ಪ್ರತಿಭಟನೆ ಮಾಡದಂತೆ ಪೊಲೀಸರು ಮನವಿ ಮಾಡಿದಾಗ ಇದನ್ನು ಒಪ್ಪದ ಪ್ರತಿಭಟನಾಕಾರರು, ಗ್ರಾಮಾಂತರ ಠಾಣೆ ಪಿಎಸ್‌ಐ ಬ್ಯಾಟರಾಯನಗೌಡ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ದೂರವಾಣಿ ಮುಖಾಂತರ ಶಾಸಕ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಉಸ್ತುವಾರಿ ಸಚಿವರು ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿದ್ದಾರೆ. ಸಂಜೆ ವೇಳೆಗೆ ಸಚಿವರು ಸ್ಥಳಕ್ಕೆ ಆಗಮಿಸುತ್ತಾರೆಂದು ಪೊಲೀಸರು ತಿಳಿಸಿದ್ದರಿಂದ ರಸ್ತೆ ತಡೆ ಹಿಂಪಡೆಯ ಲಾಯಿತು. ಆದರೆ ಸಂಜೆ 4.30 ಆದರೂ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಬಾರದಿದ್ದರಿಂದ ಮತ್ತೆ ರಸ್ತೆ ತಡೆ ನಡೆಸಲಾಯಿತು.
ಜಿಪಂ ಸದಸ್ಯೆ ಚಂಚಲಾ, ಟಿಎಸಿಪಿಸಿಎಂಎಸ್ ಅಧ್ಯಕ್ಷ ಲೋಹಿತ್ ಕೌಡಹಳ್ಳಿ, ಗ್ರಾಪಂ ಅಧ್ಯಕ್ಷೆ ಶಿಲ್ಪಾ, ಗ್ರಾಪಂ ಮಾಜಿ ಅಧ್ಯಕ್ಷೆ ರೂಪಾ, ಕಸಾಪ ಬೆಳಗೋಡು ಹೋಬಳಿ ಅಧ್ಯಕ್ಷೆ ನೇತ್ರಾವತಿ, ಹೋರಾಟಗಾರ ಬಾಳ್ಳು ಗೋಪಾಲ್, ಜೈ ಭೀಮ್ ಮಂಜುನಾಥ್, ಕರವೇ ತಾಲೂಕು ಅಧ್ಯಕ್ಷ ದಿನೇಶ್, ರೈತ ಸಂಘದ ಅಧ್ಯಕ್ಷ ಗಿರೀಶ್, ಜೈ ಕರ್ನಾಟಕ ಸಂಘದ ಹೋಬಳಿ ಅಧ್ಯಕ್ಷ ಉಬೇೆದುಲ್ಲಾ, ಬಿ.ಎಸ್.ಮಲ್ಲಿಕಾರ್ಜುನ್, ಬೆಳೆಗಾರರ ಸಂಘದ ಬಸವಣ್ಣ, ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಮತ್ತಿತರರಿದ್ದರು.