Advertisement

ಬಸ್‌ ನಿಲುಗಡೆಗೆ ಆಗ್ರಹಿಸಿ ಪ್ರತಿಭಟನೆ

06:14 PM Aug 27, 2022 | Shwetha M |

ಮುದ್ದೇಬಿಹಾಳ: ತಾಲೂಕಿನ ವಿಜಯಪುರ ಮಾರ್ಗದಲ್ಲಿ ಬರುವ ಢವಳಗಿ ಗ್ರಾಮದ ಹೊರ ವಲಯದಲ್ಲಿನ ಕೆಇಬಿ ಸ್ಟೇಷನ್‌ ಹತ್ತಿರ ಕಸ್ತೂರಬಾ ಗಾಂಧಿ  ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಬಸ್‌ ನಿಲುಗಡೆಗೆ ಆಗ್ರಹಿಸಿ ಶುಕ್ರವಾರ ದಿಢೀರ್‌ನೆ ರಸ್ತೆಯಲ್ಲೇ ಧರಣಿ ಕುಳಿತು ಪ್ರತಿಭಟಿಸಿದ ಪರಿಣಾಮ ಬಹಳ ಹೊತ್ತು ಸಂಚಾರ ಬಂದ್‌ ಆಗಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು.

Advertisement

ಕೆಇಬಿ ಸ್ಟೇಷನ್‌ ಹತ್ತಿರ ಇರುವ ಹಾಸ್ಟೆಲ್‌ನಲ್ಲಿ ಢವಳಗಿ, ಮುದ್ದೇಬಿಹಾಳ ಪಟ್ಟಣದ ಪ್ರೌಢಶಾಲೆ, ಕಾಲೇಜುಗಳಿಗೆ ನಿತ್ಯ ಹೋಗಿ ಬರುವ ಹಿಂದುಳಿದ ವರ್ಗದ ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಹಾಸ್ಟೆಲ್‌ನಿಂದ ಢವಳಗಿ ಗ್ರಾಮಕ್ಕೆ ಬರಬೇಕೆಂದರೆ ಅಂದಾಜು ಒಂದೂವರೆ ಕಿ.ಮೀ. ದೂರವಿದ್ದು ಬಸ್‌ ಹತ್ತಲು, ಇಳಿಯಲು ನಿತ್ಯವೂ ತೊಂದರೆ ಅನುಭವಿಸುವ ಪರಿಸ್ಥಿತಿ ಇದೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಕೆಇಬಿ ಸ್ಟೇಷನ್‌ ಹತ್ತಿರ ಎಲ್ಲ ರೀತಿಯ ಬಸ್‌ ಗಳ ನಿಲುಗಡೆ ಕಲ್ಪಿಸುವಂತೆ ಹಲವು ಬಾರಿ ಸಾರಿಗೆ ಘಟಕದವರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಇದು ವಿದ್ಯಾರ್ಥಿನಿ ಯರ ಪ್ರತಿಭಟನೆಗೆ ಕಾರಣವಾಗಿತ್ತು.

ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಲು ಗ್ರಾಪಂ ವತಿಯಿಂದ ಕೆಇಬಿ ಸ್ಟೇಷನ್‌ ಹತ್ತಿರ ಬಸ್‌ ತಂಗುದಾಣ ನಿರ್ಮಿಸಲಾಗಿದೆ. ವಿನಂತಿ ಮೇರೆಗೆ ಬಸ್‌ ನಿಲುಗಡೆ ನಾಮ ಫಲಕವನ್ನೂ ಅಳವಡಿಸಲಾಗಿದೆ. ಇಲ್ಲಿ ಎಲ್ಲ ರೀತಿಯ ಬಸ್‌ ನಿಲುಗಡೆ ಮಾಡುವಂತೆ ಘಟಕ ವ್ಯವಸ್ಥಾಪಕರಿಗೆ ಮನವಿಗಳನ್ನೂ ಕೊಡಲಾಗಿದೆ. ಆದರೂ ಬಸ್‌ಗಳ ಚಾಲಕರು, ನಿರ್ವಾಹಕರ ಬೇಜವಾಬ್ದಾರಿಯಿಂದ ಬಸ್‌ ನಿಲ್ಲಸದೆ ಹಾಗೆಯೇ ಮುಂದೆ ಹೋಗುತ್ತಿರುವುದು ವಿದ್ಯಾರ್ಥಿನಿಯರ ಸಹನೆಯ ಕಟ್ಟೆ ಒಡೆಯುವಂತೆ ಮಾಡಿತ್ತು.

ಪ್ರತಿಭಟನೆ ವಿಷಯ ತಿಳಿದು ಮುದ್ದೇಬಿಹಾಳ ಸಾರಿಗೆ ಘಟಕದಿಂದ ಸ್ಥಳಕ್ಕೆ ಆಗಮಿಸಿದ್ದ ಸಹಾಯಕ ಸಾರಿಗೆ ನಿಯಂತ್ರಕ ಡಿ.ಎನ್‌ .ಬಿಳೇಭಾವಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ವಿದ್ಯಾರ್ಥಿನಿಯರು ತಮ್ಮ ಅಳಲು, ಸಂಕಟವನ್ನು ತೋಡಿಕೊಂಡರು. ನಾವು ಪಾಸ್‌ ಇರುವವರು ಎನ್ನುವ ಕಾರಣಕ್ಕೆ ತಂಗುದಾಣದ ಬಳಿ ಬಸ್‌ ನಿಲ್ಲಿಸುತ್ತಿಲ್ಲ ಎಂದು ದೂರಿದರು. ಸಮಸ್ಯೆಗೆ ಸಂಪೂರ್ಣ ಪರಿಹಾರ ದೊರಕುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.

ನಮ್ಮ ಘಟಕದ ಎಲ್ಲ ನಿರ್ವಾಹಕರು, ಚಾಲಕರ ಚಾರ್ಟ್‌ಸೀಟ್‌ ಮೇಲೆ ಢವಳಗಿ ಕೆಇಬಿ ಹತ್ತಿರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್‌ ಸ್ಟಾಪ್‌ ಮಾಡಬೇಕು ಎಂದು ಸೂಚಿಸಿದ್ದೇವೆ. ವಿಜಯಪುರ ಘಟಕದ ಬಸ್‌ಗಳಿಗೂ ಮಾಹಿತಿ ನೀಡುತ್ತೇವೆ. ಇನ್ನು ಮುಂದೆ ಯಾವ ಬಸ್‌ ಸ್ಟಾಪ್‌ ಮಾಡಲ್ಲವೋ ಆ ಬಸ್‌ ನಂಬರ್‌ ನಮಗೆ ತಿಳಿಸಿದರೆ ಆ ನಿರ್ವಾಹಕ, ಚಾಲಕರ ಮೇಲೆ ಕ್ರಮ ತೆಗೆದುಕೊಳ್ಳುತ್ತೆವೆ ಎಂದು ಬಿಳೇಭಾವಿಯವರು ವಿದ್ಯಾರ್ಥಿನಿಯರಿಗೆ ವಾಗ್ಧಾನ ಮಾತಿ ತಮ್ಮನ್ನು ಸಂಪರ್ಕಿಸಲು ತಮ್ಮ ಮೊಬೈಲ್‌ ನಂಬರ್‌ ನೀಡಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ಇದಕ್ಕೆ ವಿದ್ಯಾರ್ಥಿನಿಯರು ಸ್ಪಂ ದಿಸಿ ಧರಣಿ ಕೈಬಿಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next