ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆಗೆ ಕಾರಣರಾಗಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಹು-ಧಾ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಬುಧವಾರ ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಿನಿವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆಗೆ ಸಚಿವ ಈಶ್ವರಪ್ಪ ಅವರು ನೇರ ಕಾರಣರಾಗಿದ್ದಾರೆ. ಈ ಕುರಿತು ಸಂತೋಷ ಪಾಟೀಲ ಹಿಂದೆಯೇ ಬಹಿರಂಗವಾಗಿ ಪ್ರಸ್ತಾಪಿಸಿದ್ದರು. ಈ ಪರ್ಸಂಟೇಜ್ ವ್ಯವಹಾರವನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಓರ್ವ ವ್ಯಕ್ತಿಯ ಪ್ರಾಣ ಬಲಿ ತೆಗೆದುಕೊಂಡಿದೆ. ಕೂಡಲೇ ಅವರನ್ನು ಬಂಧಿಸಬೇಕು. ಸಚಿವ ಸಂಪುಟದಿಂದ ವಜಾ ಮಾಡಬೇಕು. 40 ಪರ್ಸಂಟೇಜ್ ಸರಕಾರ ಈ ದೇಶಕ್ಕೆ ಮಾರಕ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷ ಇಮ್ರಾನ್ ಎಲಿಗಾರ ಮಾತನಾಡಿ, ಬಿಜೆಪಿ ಸರಕಾರ 40 ಪರ್ಸಂಟೇಜ್ ಎನ್ನುವುದನ್ನು ಈಶ್ವರಪ್ಪ ಸಾಬೀತು ಪಡಿಸಿದ್ದಾರೆ. ಇಂತಹ ಗಂಭೀರ ಪ್ರಕರಣದ ನಂತರವೂ ಬಹುತೇಕ ಸಚಿವರು ಈಶ್ವರಪ್ಪ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದನ್ನು ನೋಡಿದರೆ ಇತರೆ ಸಚಿವರು ಪರ್ಸಂಟೇಜ್ ವ್ಯವಹಾರದಲ್ಲಿ ತೊಡಗಿದ್ದಾರೆಂಬುದು ಸ್ಪಷ್ಟವಾಗಿದೆ. ಕೂಡಲೇ ಬಂಧಿಸಿ ಅವರಿಂದ ರಾಜೀನಾಮೆ ಪಡೆಯದಿದ್ದರೆ ಬೃಹತ್ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.
ಯುವ ಕಾಂಗ್ರೆಸ್ ಮುಖಂಡರಾದ ಪ್ರವೀಣ ಶೆಲವಡಿ, ಸತೀಶ ಗಿರಿಯಾಲ, ಅರ್ಬಾಜ್ ಮನಿಯಾರ್, ಕಾಶಿಂ ಕೂಡಲಗಿ, ಆಕಾಶ ಕೋನೇರಿ, ನಾಗರ್ಜುನ ಕತ್ರಿಮಾಲ್, ಸಂತೋಷ ನಾಯಕ, ಸೌರಭ್ ಮಾನೇಕರ, ಮಹೇಶ ಭಜಂತ್ರಿ, ಚೇತನ ಪಾಟೀಲ, ರಫೀಕ್ ನದಾಫ್, ದಾದಾಪೀರ ಕರ್ನೂಲ್ ಸೇರಿದಂತೆ ಇನ್ನಿತರರಿದ್ದರು.
ಈಶ್ವರಪ್ಪ ರಾಜಿನಾಮೆಗೆ ನೀರಲಕೇರಿ ಒತ್ತಾಯ
ಧಾರವಾಡ: ಬೆಳಗಾವಿಯ ಸಂತೋಷ ಪಾಟೀಲ ಆತ್ಮಹತ್ಯೆಗೆ ನೇರ ಹೊಣೆ ಹೊತ್ತು ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಬೇಕು. ಇಲ್ಲವಾದರೆ ಸಚಿವ ಸಂಪುಟದಿಂದ ಅವರನ್ನು ವಜಾಗೊಳಿಸಬೇಕೆಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್ .ನೀರಲಕೇರಿ ಹೇಳಿದರು. ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಸ್.ಈಶ್ವರಪ್ಪ ಮತ್ತು ಅವರ ಮಿತ್ರರ ಕುಮ್ಮಕ್ಕಿನಿಂದ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಶರಣಾದ ಬಗ್ಗೆ ಗಮನ ಹರಿಸುವಂತೆ ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು. ನ್ಯಾಯ ಮತ್ತು ಸಮಾನತೆ ಎತ್ತಿ ಹಿಡಿಯುವ ದೃಷ್ಟಿಯಿಂದ ಈಶ್ವರಪ್ಪ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.