ಬೆಳಗಾವಿ: ಖಾನಾಪುರ ತಾಲೂಕಿನ ಬೀಡಿ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬೀಡಿ ಗ್ರಾಮದ ಸುತ್ತಲಿನ 10ಕ್ಕೂ ಹೆಚ್ಚು ಹಳ್ಳಿಗಳಿಗೆ ಈ ಆರೋಗ್ಯ ಕೇಂದ್ರವೇ ಆಸರೆಯಾಗಿದೆ. ನೂರಾರು ಜನ ನಿತ್ಯ ಈ ಆಸ್ಪತ್ರೆಗೆ ಬರುತ್ತಾರೆ. ಆದರೆ ಇಲ್ಲಿ ಅನೇಕ ಸೌಲಭ್ಯಗಳು ಇಲ್ಲದೇ ರೋಗಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಅನೇಕ ಸಲ ಸಂಬಂಧಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರು ಮಾತ್ರ ಇದ್ದು, ಇವರು ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಚಿಕಿತ್ಸೆ ಪಡೆಯಲು ಬರುವ ರೋಗಿಗಳ ಕಡೆಯಿಂದ ಹಣ ಪಡೆಯುತ್ತಿದ್ದಾರೆ. ಹೀಗಾಗಿ ಈ ವೈದ್ಯರನ್ನು ಬದಲಾವಣೆ ಮಾಡಿ ಬೇರೆಯವರನ್ನು ನೇಮಿಸಬೇಕು. ರೋಗಿಗಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಆರೋಗ್ಯ ಇಲಾಖೆಯದ್ದು, ಆದರೆ ಈ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಆಪಾದಿಸಿದರು.
ಆಸ್ಪತ್ರೆಯಲ್ಲಿ ರಕ್ತ ತಪಾಸಣಾ ಕೇಂದ್ರವಿಲ್ಲ. ಆಂಬ್ಯುಲೆನ್ಸ್ ಸೌಲಭ್ಯವೂ ಇಲ್ಲ. ವೈದ್ಯರ ಕೊರತೆಯಿಂದ ನಿತ್ಯ ಅನೇಕ ರೋಗಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಶೌಚಾಲಯ ಹಾಗೂ ಸ್ವಚ್ಛತೆ ಸಮಸ್ಯೆಯಂತೂ ಹೇಳತೀರದು. ಹೀಗಾಗಿ ಕೂಡಲೇ ಆಸ್ಪತ್ರೆಗೆ ಅಗತ್ಯ ಸೌಕಯ್‌ಗಳು ಕಲ್ಪಿಸುವ ಮೂಲಕ ರೋಗಿಗಳ ರಕ್ಷಣೆಗೆ ನಿಲ್ಲಬೇಕು ಎಂದು ಒತ್ತಾಯಿಸಿದರು.
ಪ್ರತಿಭಾನೆಯಲ್ಲಿ ಗ್ರಾಮಸ್ಥರಾದ ಶಂಕರಗೌಡ ಪಾಟೀಲ, ಬಾಬು ಕದಂ, ಎಸ್.ಜಿ. ಹಿರೇಮಠ, ರೇಣುಕಾ ಬಾಗವಾಡಕರ, ಉಮೇಶ ಉಳ್ಳಾಗಡ್ಡಿ, ಅರ್ಜುನ ಕಲಘಟಗಿ, ಕೃಷ್ಣಾ ಕಮ್ಮಾರ ಸೇರಿದಂತೆ ಇತರರು ಇದ್ದರು.