ಹುಬ್ಬಳ್ಳಿ: ರಾಜ್ಯದಲ್ಲಿ ಎಪಿಎಂಸಿಗಳಲ್ಲಿ ಆರಂಭಿಸಿರುವ ಇ-ಪಾವತಿ ಕೂಡಲೇ ಕೈಬಿಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಐಸಿಸಿ)ಯಿಂದ ಶನಿವಾರ ಪ್ರತಿಭಟನೆ ನಡೆಸಿ ತಹಶೀಲ್ದಾರಗೆ ಮನವಿ ಸಲ್ಲಿಸಲಾಯಿತು.
ವರ್ತಕರಿಗೆ, ರೈತರಿಗೆ ಹಾಗೂ ಹಮಾಲಿ ಕಾರ್ಮಿಕರಿಗೆ ಕಂಟಕವಾಗಿರುವ ಇ-ಪಾವತಿ ಯೋಜನೆ ಕೈ ಬಿಡಬೇಕು. ದೇಶದಲ್ಲಿ ಜಾರಿಯಾಗಿರುವ ಜಿಎಸ್‌ಟಿ ತೆರಿಗೆಯಂತೆ ಎಪಿಎಂಸಿಗಳಲ್ಲಿ ಒಂದೇ ರೀತಿಯ ಸೆಸ್ ಅನುಷ್ಠಾನಗೊಳ್ಳಬೇಕು, ರೇಮ್ಸ್ (ರಾಷ್ಟ್ರೀಯ ಮಾರ್ಕೆಟಿಂಗ್ ಸರ್ವಿಸಸ್) ಅವಶ್ಯಕತೆ ಇಲ್ಲ ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಪಿಎಂಸಿ ಕ್ರಿಯಾ ಸಮಿತಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ರಾಜ್ಯಾದ್ಯಂತ ಎಪಿಎಂಸಿ ಮಾರುಕಟ್ಟೆಗಳಲ್ಲಿ ಜಾರಿ ಮಾಡಿರುವ ಇ- ಪಾವತಿಯಿಂದ ವರ್ತಕರಿಗೆ ಖರೀದಿಸಿದ ಕೃಷಿ ಉತ್ಪನ್ನಗಳಿಗೆ ಹಣ ನೀಡಲು ಸಾಧ್ಯವಾಗುವುದಿಲ್ಲ. ಇದರಿಂದ ತುಂಬಾ ತೊಂದರೆಯಾಗುತ್ತಿದ್ದು, ಕೂಡಲೇ ಇ-ಪಾವತಿ ಯೋಜನೆ ಕೈ ಬಿಡಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಶೇ.1.5ರಷ್ಟು ಸೆಸ್ ಜಾರಿಯಲ್ಲಿದೆ. ಆದರೆ ದೇಶದ ವಿವಿಧ ರಾಜ್ಯಗಳಲ್ಲಿ ಶೇ.0.85, ಶೇ.0.90, ಶೇ. 0.75, ಶೇ.1.00ರಷ್ಟು ಸೆಸ್ ವ್ಯವಸ್ಥೆಯಿದೆ. ಆದ್ದರಿಂದ ದೇಶದಲ್ಲಿ ಒಂದೇ ರೀತಿಯ ಸೆಸ್ ಜಾರಿಯಾಗಬೇಕು ಎಂದು ಒತ್ತಾಯಿಸಿದರಲ್ಲದೇ ನಮ್ಮ ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ಕೆಸಿಸಿಐ ಅಧ್ಯಕ್ಷ ರಮೇಶ ಪಾಟೀಲ ಮಾತನಾಡಿ, ಎಪಿಎಂಸಿಗಳಲ್ಲಿ ಜಾರಿಯಾಗಿರುವ ಸೆಸ್ ಪದ್ಧತಿ ಅವೈಜ್ಞಾನಿಕತೆಯಿಂದ ಕೂಡಿದೆ. ಇ-ಪಾವತಿ ವರ್ತಕರಿಗೆ ಹಾನಿಯುಂಟು ಮಾಡುತ್ತಿದೆ. ಆದ್ದರಿಂದ ವಾಣಿಜ್ಯೋದ್ಯಮ ಸಂಸ್ಥೆಯ ನೇತೃತ್ವದಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಲ್ಯಾಮಿಂಗ್ಟನ್ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಹಾಯ್ದು ಮಿನಿವಿಧಾನಸೌಧಕ್ಕೆ ತೆರಳಿ ತಹಶೀಲ್ದಾರಗೆ ಮನವಿ ಸಲ್ಲಿಸಲಾಯಿತು. ಎಸ್.ಜಿ. ಕೆಮೂ¤ರ, ಶಿವಶಂಕರಪ್ಪ ಮೂಗಬಸ್ತ, ಶರಣಬಸಯ್ಯ ಕದರಳಿಮಠ, ಸಿದ್ದೇಶ್ವರ ಕಮ್ಮಾರ, ವಿನಯ ಜವಳಿ ಮೊದಲಾದವರು ಪ್ರತಿಭಟನೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.