ಬನಹಟ್ಟಿ: ಕೃಷ್ಣೆಯ ಪ್ರವಾಹದಿಂದ ತತ್ತರಿಸಿದ ಜನರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಸಂತ್ರಸ್ತರ ಪರಿಹಾರಕ್ಕೆ ಸಂಬಂಧ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಸಮರ್ಪಕವಾಗಿ ಸರ್ವ ಕಾರ್ಯ ನಡೆದಿಲ್ಲ. ಕೆಲ ಅರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಸಂತ್ರಸ್ತರ ಕಣ್ಣೀರು ಒರೆಸಬೇಕು. ಹಲವು ಮನೆಗಳಿಗೆ ಪರಿಹಾರ ಸಮರ್ಪಕವಾಗಿ ದೊರೆತಿಲ್ಲ. ಬೆಳೆಗಳಿಗೆ ಸೂಕ್ತ ಪರಿಹಾರ ದೊರೆಯದೇ ರಾಜಕೀಯ ಪ್ರೇರಿತವಾಗಿ ತಾರತಮ್ಯ ಎಸಗಲಾಗುತ್ತಿದೆ ಎಂದು ಕಾರ್ಯಕರ್ತರು ಆರೋಪಿಸಿದರು.
ಕೃಷ್ಣೆಯ ಪ್ರವಾಹದಲ್ಲಿ ಗುಲ್ಲಿ ಮಳ್ಳಿ ಪ್ರದೇಶವೇ ಕೊಚ್ಚಿ ಹೋಗಿತ್ತು. ಅಂಥಹ ಪ್ರದೇಶದಲ್ಲಿ ವಾಸಿಸುವ 40 ಕ್ಕೂ ಅಧಿ ಕ ಕುಟುಂಬಗಳ ಪೈಕಿ ಅನೇಕ ಕುಟುಂಬಗಳಿಗೆ ಪರಿಹಾರ ದೊರಕದಿರುವುದು ವಿಪರ್ಯಾಸದ ಸಂಗತಿ. ಪರಿಹಾರ ವಿತರಣೆಯಲ್ಲಿಯೂ ರಾಜಕೀಯ ವೈಷಮ್ಯ ಸಲ್ಲದು ಎಂದು ಹನಗಂಡಿಯ ನೀಲೇಶ ದೇಸಾಯಿ ಬೇಸರ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಪ್ರಶಾಂತ ಚನಗೊಂಡ ಮಾತನಾಡಿ, ಬೆಳೆ ಪರಿಹಾರಕ್ಕೆ ಸಂಬಂಧ ತಾಂತ್ರಿಕ ದೋಷ ಕಾರಣ ವಿಳಂಬವಾಗುತ್ತಿದೆ. ಈಗಾಗಲೇ ಪ್ರವಾಹ ಪೀಡಿತ ಪ್ರದೇಶದಲ್ಲಿನ ಸಂತ್ರಸ್ತ ಕುಟುಂಬಗಳಿಗೆ ಪ್ರಾಮಾಣಿಕವಾಗಿ ಪರಿಹಾರ ಒದಗಿಸಲಾಗಿದ್ದು, ಇನ್ನೂ ಕೆಲ ಕುಟುಂಬಗಳ ಪರಿಶೀಲನೆ ಮಾಡಲಾಗಿದೆ. ಅರ್ಜಿ ಸ್ವೀಕಾರ ಸಂದರ್ಭ ವಿಳಂಬವಾದಲ್ಲಿ ಅಂಥವರನ್ನೂ ಗುರುತಿಸಿ ಪರಿಹಾರ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಸಂತ್ರಸ್ತರ ನೆರವಿಗೆ ಸಂದರ್ಭ ರಾಜಕೀಯ ಪ್ರೇರಿತವಾಗಿ ಕಾಂಗ್ರೆಸ್ ಸಂಬಂ ಧಿಸಿದ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ನಿರ್ಲಕ್ಷ್ಯವಾಗಿದೆ. ತಾರತಮ್ಯ ಎಸಗದೆ ಎಲ್ಲ ಸಂತ್ರಸ್ತರಿಗೂ ಪರಿಹಾರ ಒದಗಿಸಬೇಕು ಎಂದು ಕಾಂಗ್ರೆಸ್ ಮುಖಂಡ ಡಾ| ಪದ್ಮಜೀತ ನಾಡಗೌಡ ಒತ್ತಾಯಿಸಿದರು.
ಶಂಕರ ಸೊರಗಾಂವಿ, ರಾಜು ದೇಸಾಯಿ, ರವಿ ಬಾಡಗಿ, ಶಂಕರ ಜಾಲಿಗಿಡದ, ಸುಕುಮಾರ ದೇಸಾಯಿ, ಕುಮಾರ ಬಿಳ್ಳೂರ, ಸಿದ್ದಪ್ಪ ಸೊರಗಾಂವಿ, ಶ್ರೀಶೈಲ ಮೇಣಿ, ಸತ್ಯಪ್ಪಮಗದುಮ್, ಚಿದಾನಂದ ಮಟ್ಟಿಕಲ್ಲಿ, ದುಂಡಪ್ಪ ಕರಿಗಾರ, ಮಾಳು ಹಿಪ್ಪರಗಿ, ಸಣ್ಣಕ್ಕಿ, ಕುಮಾರ ಬಿಳ್ಳೂರ, ಸಂಜು ಅಮ್ಮಣಗಿ ಅನೇಕರಿದ್ದರು.