ಶಿರಹಟ್ಟಿ: ಭಾರತದಲ್ಲಿ ಹಿಂದೂ ಮುಸ್ಲಿಂ ಸೇರಿದಂತೆ ಸರ್ವ ಸಮುದಾಯದ ಜನರು ಜೇನಿನಗೂಡಿನಂತೆ ಬದುಕುತ್ತಿದ್ದಾರೆ. ಇಂತಹ ಜನರನ್ನು ಜಾತಿ ಹೆಸರಿನಲ್ಲಿ ಒಡೆದು ಆಳುವ ತಂತ್ರವನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದ್ದು, ದೇಶದಲ್ಲಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕಾಯ್ದೆ ಜಾರಿಗೆ ತರುವುದರ ಮೂಲಕ ಜಾತಿ ರಾಜಕಾರಣ ಮಾಡುತ್ತಿದೆ. ಜೊತೆಗೆ ದೇಶದ ಆಶಯಗಳನ್ನು ಕಗ್ಗೊಲೆ ಮಾಡಿದ ಕೇಂದ್ರದ ನೀತಿಗೆ ಧಿಕ್ಕಾರ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಸಾರ್ವಜನಿಕರ ವತಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕಾಯ್ದೆ ಜಾರಿಗೆ ತರಬಾರದೆಂದು ಆಗ್ರಹಿಸಿ ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಭಾರತವು ಸಹಿಷ್ಣತೆ ಹಾಗೂ ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಇಂತಹ ಪವಿತ್ರ ನಾಡಿನಲ್ಲಿ ಜನವಿರೋಧಿ ಹಾಗೂ ಸಂವಿಧಾನ ವಿರೋಧಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರುವುದರ ಮೂಲಕ ಜನರ ಭಾವನೆ ಮತ್ತು ಭಾವೈಕ್ಯತೆಗೆ ಚ್ಯುತಿ ತರಲು ಬಿಜೆಪಿ ಹವಣಿಸುತ್ತಿದೆ. ಆದ್ದರಿಂದ ರಾಷ್ಟ್ರಪತಿಗಳು ಈ ಕಾಯ್ದೆ ಜಾರಿ ಮಾಡಬಾರದು. ಈ ಕಾಯ್ದೆಯಿಂದ ಅಲ್ಪಸಂಖ್ಯಾತರು, ದಲಿತರು, ಬುಡುಕಟ್ಟು ಜನಾಂಗ ಸೇರಿದಂತೆ ಇನ್ನೂ ಹಲವು ಧರ್ಮದವರನ್ನು ಹತ್ತಿಕ್ಕಲು ಮತ್ತು ಶೋಷಣೆಗೆ ಒಳಗಾಗುತ್ತಾರೆ. ಈಗಾಗಲೇ ಆಸ್ಸಾಂ ರಾಜ್ಯದಲ್ಲಿ ಈ ಕಾಯ್ದೆಯಿಂದ ಸಾಕಷ್ಟು ಆಸ್ತಿಪಾಸ್ತಿ ಹಾಗೂ ಜೀವ ಹಾನಿಯಾಗಿದೆ. ಇದೇ ರೀತಿ ದೇಶದಲ್ಲಿ ಜಾರಿಯಾದರೆ ಜನರ ಆಸ್ತಿ ಸೇರಿದಂತೆ ದೇಶದ ಆರ್ಥಿಕ ಪ್ರಗತಿಗೆ ಕಂಟಕವಾಗುತ್ತದೆ ಎಂದರು.
ನಜೀರ ಡಂಬಳ, ಎ.ವೈ. ನವಲಗುಂದ, ಎಂ.ಆರ್. ಘಂಟಿ ಮಾತನಾಡಿ, ದೇಶವನ್ನು ಅಭಿವೃದ್ಧಿಪಡಿಸುತ್ತೇವೆ. ದೇಶಕ್ಕೆ ಒಳ್ಳೆ ದಿನಗಳು ಬರುತ್ತವೆ ಎಂದು ಬುರೆಡೆ ಬಿಟ್ಟು, ದೇಶವನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಅಧೋಗತಿಯತ್ತ ತಳ್ಳಿದ್ದ ಅಪಕೀರ್ತಿ ಪ್ರಧಾನಿ ನರೇಂದ್ರ ಮೋದಿ ಹೊತ್ತಿದ್ದಾರೆ ಎಂದು ದೂರಿದರು.
ಎಚ್.ಡಿ. ಮಾಗಡಿ, ವೈ.ಎಸ್. ಪಾಟೀಲ, ಮಾಲತೇಶ ದಶಮನಿ, ಬುಡನಶ್ಯಾ ಮಕಾಂದರ, ಇಸಾಕ್ ಆದ್ರಳ್ಳಿ, ಅಶರತಲಿ ಢಾಲಾಯಿತ, ಪರಮೇಶ ಪರಬ, ನಜೀರ್ ಡಂಬಳ, ಎ.ವೈ. ನವಲಗುಂದ, ರಾಜೇಸಾಬ್ ಢಾಲಾಯಿತ, ಮೋಲಾನ ಮುಜಾವರ, ಮಾಬುಸಾಬ್ ಸೇರಿದಂತೆ ಪಟ್ಟಣದ ಮುಖಂಡರು ಇದ್ದರು.