Advertisement

ನಾಲ್ಕೂ ಸಾರಿಗೆ ನಿಗಮಗಳ ವಿಲೀನಕ್ಕೆ ಆಗ್ರಹಿಸಿ ಪ್ರತಿಭಟನೆ

12:36 PM Jun 28, 2019 | Suhan S |

ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳನ್ನು ವಿಲೀನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಸ್ಟಾಫ್ ಆಂಡ್‌ ವರ್ಕರ್ಸ್‌ ಫೆಡರೇಷನ್‌ ನೇತೃತದಲ್ಲಿ ಸಾರಿಗೆ ನೌಕರರು ಗುರುವಾರ ‘ಬೆಂಗಳೂರು ಚಲೋ’ ನಡೆಸಿದರು.

Advertisement

ನಗರದ ಲಾಲ್ಬಾಗ್‌ ಮುಖ್ಯದ್ವಾರದಿಂದ ನೂರಾರು ಸಂಖ್ಯೆಯಲ್ಲಿ ಹೊರಟ ಸಾರಿಗೆ ನೌಕರರು, ಶಾಂತಿನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಕೇಂದ್ರ ಕಚೇರಿ ಬಳಿ ಸೇರಿ ಧರಣಿ ನಡೆಸಿದರು. ಆದರೆ, ಧರಣಿಯಿಂದ ಬಸ್‌ಗಳ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಲಿಲ್ಲ. ಎಂದಿನಂತೆ ಕಾರ್ಯಾಚರಣೆ ಇತ್ತು.

ಫೆಡರೇಷನ್‌ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್‌ ಮಾತನಾಡಿ, ಪೊಲೀಸ್‌ ಇಲಾಖೆಯಂತೆಯೇ ರಸ್ತೆ ಸಾರಿಗೆ ನಿಗಮಗಳು ಕೂಡ ಸಾರ್ವಜನಿಕರಿಗೆ ಸೇವೆ ಒದಗಿಸುತ್ತಿವೆ. ಆದ್ದರಿಂದ ಸರ್ಕಾರ ಸಾಮಾಜಿಕ ಹೊಣೆಗಾರಿಕೆ ಆಧಾರದಲ್ಲಿ ನಾಲ್ಕೂ ನಿಗಮಗಳಿಗೆ ವಾರ್ಷಿಕ ಸಾವಿರ ಕೋಟಿ ರೂ. ಅನುದಾನ ನೀಡಬೇಕು. ವಿದ್ಯಾರ್ಥಿಗಳ ರಿಯಾಯಿತಿ ಬಸ್‌ ಪಾಸಿನ ಬಾಬ್ತಿನಲ್ಲಿ ಬಾಕಿ ಇರುವ ಹಣವನ್ನೂ ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. 1997ರ ನಂತರ ಕೆಎಸ್‌ಆರ್‌ಟಿಸಿಯನ್ನು ನಾಲ್ಕು ನಿಗಮಗಳನ್ನಾಗಿ ವಿಭಜಿಸಲಾಗಿದೆ. ಇದಾದ ನಂತರ ನಾಲ್ಕೂ ನಿಗಮಗಳ ಒಟ್ಟಾರೆ ನಷ್ಟ 1,673 ಕೋಟಿ ರೂ. ಆಗಿದೆ. ನಿಗಮಗಳು 1,526 ಕೋಟಿ ಸಾಲದ ಹೊರೆಯಲ್ಲಿವೆ. ನಾಲ್ಕು ನಿಗಮಗಳನ್ನು ಒಂದುಗೂಡಿಸಿದರೆ ನಷ್ಟದ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದರು.

ಸಾರಿಗೆ ನೌಕರರ ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ವಿಫ‌ಲರಾಗಿರುವ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರನ್ನು ಬದಲಾಯಿಸಬೇಕು. ಸಾರಿಗೆ ನಿಗಮಗಳು ಖರೀದಿಸುವ ಡೀಸೆಲ್ ಮೇಲೆ ರಾಜ್ಯ ಸರ್ಕಾರ ವಿಧಿಸುವ ಸುಂಕವನ್ನು ಶೇ.50ರಷ್ಟು ಕಡಿಮೆ ಮಾಡಬೇಕು. ನಿಗಮಗಳ ವಾಹನಗಳಿಗೆ ಹೆದ್ದಾರಿ ಸುಂಕ ಮತ್ತು ಮೋಟಾರು ವಾಹನ ತೆರಿಗೆಯಿಂದ ವಿನಾಯ್ತಿ ನೀಡಬೇಕು, ನೌಕರರ ವೇತನವನ್ನು ಸರ್ಕಾರವೇ ಪಾವತಿಸಬೇಕು, ಮಹಾನಗರ ಮತ್ತು ನಗರ ಪಾಲಿಕೆಗಳು ಮತ್ತಿತರ ಸ್ಥಳೀಯ ಸಂಸ್ಥೆಗಳು ಸಾರಿಗೆ ನಿಗಮಗಳ ನಗರ ಸಾರಿಗೆ ವ್ಯವಸ್ಥೆಗೆ ಸೂಕ್ತ ಅನುದಾನ ನೀಡಬೇಕು, ವಿಕಲಚೇತನರ ಕಾಯ್ದೆ 1995ರ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಸಾರಿಗೆ ನಿಗಮಗಳಿಗೆ ಅನುದಾನ ನೀಡಬೇಕು. ಕರ್ತವ್ಯದ ಸ್ಥಳದಲ್ಲಿ ಕಿರುಕುಳ ತಾಳಲಾರದೆ ಆತ್ಮಹತ್ಯೆ ಯತ್ನಿಸಿದ ಅನೇಕ ನೌಕರರಿದ್ದಾರೆ. ಆಕಸ್ಮಿಕವಾಗಿ ಬದುಕುಳಿದರೆ ಅವರ ವಿರುದ್ಧ ಶಿಸ್ತುಕ್ರಮದ ಹೆಸರಿನಲ್ಲಿ ಮತ್ತಷ್ಟು ಕಿರುಕುಳ ನೀಡಲಾಗುತ್ತಿದೆ. ಇಂತಹ ಅಮಾನುಷ ಪರಿಸ್ಥಿತಿಯನ್ನು ಆಡಳಿತ ವರ್ಗ ತಪ್ಪಿಸಬೇಕು. ಆತ್ಮಹತ್ಯೆಗೆ ಬಲಿಯಾದ ಸಂತ್ರಸ್ತ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಎಂದು ಧರಣಿ ನಿರತ ನೌಕರರು ಆಗ್ರಹಿಸಿದರು.

ಪ್ರತಿಭಟನೆ ನಂತರ ಈ ಸಂಬಂಧ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರನ್ನು ಸಾರಿಗೆ ನೌಕರರು ಭೇಟಿಯಾಗಿ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನೌಕರರ ಬೇಡಿಕೆಗಳ ಈಡೇರಿಕೆ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next