Advertisement

ಹೊಲದ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

10:26 AM Sep 14, 2019 | Team Udayavani |

ಧಾರವಾಡ: ಮಳೆಯಿಂದ ಹಾಳಾಗಿರುವ ಹೊಲಕ್ಕೆ ಹೋಗುವ ರಸ್ತೆ ನಿರ್ಮಾಣ, ಹೊಲ ಹಾಗೂ ಬೆಳೆಗಳ ಬಗ್ಗೆ ತುರ್ತಾಗಿ ಸಮೀಕ್ಷೆ ಕೈಗೊಂಡು ಪರಿಹಾರ ನೀಡುವಂತೆ ಆಗ್ರಹಿಸಿ ತಾಲೂಕಿನ ಯಾದವಾಡ, ಲಕಮಾಪುರ, ಪುಡಕಲಕಟ್ಟಿ ಗ್ರಾಮಸ್ಥರು ಡಿಸಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ಪ್ರವಾಹ ಉಂಟಾಗಿ ಹಳ್ಳಗಳು ತುಂಬಿ ಹರಿದ ಪರಿಣಾಮ ಹಳ್ಳದ ಎರಡು ಬದಿಯ ಜಮೀನುಗಳು, ಬೆಳೆಗಳು ಹಾಗೂ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಆದರೆ, ಅಧಿಕಾರಿಗಳು ಮಾತ್ರ ಇದುವರೆಗೂ ಸರಿಯಾದ ಪರಿಹಾರ ನೀಡುವುದಾಗಲಿ, ಹಾನಿಯ ಸಮೀಕ್ಷೆಯನ್ನಾಗಲಿ ಮಾಡಿಲ್ಲ. ಹಾನಿಯಾದ ಹೊಲಗಳು, ರಸ್ತೆಗಳು ಹಾಗೂ ಬೆಳೆಗಳ ಸಮೀಕ್ಷೆ ಮಾಡುವ ಮೂಲಕ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಈಗ ಅಲ್ಪಸ್ವಲ್ಪ ಇರುವ ಭೂಮಿಯಲ್ಲಿಯೇ ಕೃಷಿ ಮಾಡಿಕೊಂಡು ಜೀವನ ನಡೆಸುವ ರೈತರ ಹೊಲಗಳಲ್ಲಿ ಕಲ್ಲು, ಮರಳು, ಕಂದಕಗಳು ನಿರ್ಮಾಣವಾಗುವುದರ ಜೊತೆಗೆ ಜಲಾವೃತವಾಗಿವೆ. ಆದರೆ ಜಿಲ್ಲಾಡಳಿತ ಯಾವುದೇ ಸಮೀಕ್ಷೆ, ಸ್ಥಳಪರಿಶೀಲನೆ ಹಾಗೂ ಪರಿಹಾರ ಕಾರ್ಯ ಕೈಗೊಂಡಿಲ್ಲ. ಜಿಲ್ಲಾಡಳಿತ ಕೂಡಲೇ ಗ್ರಾಮದ ಜಮೀನುಗಳ ಸಮೀಕ್ಷೆ ನಡೆಸಿ, ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಉಗ್ರ ಹೋರಾಟ ಅನಿವಾರ್ಯ ಆಗಲಿದೆ ಎಂದು ಎಚ್ಚರಿಸಿದರು.

ನಾಗಪ್ಪ ಬೆಳ್ಳಿಗಟ್ಟಿ, ಮಡಿವಾಳಪ್ಪಾ ದಿಂಡಲಕೊಪ್ಪ ಸೇರಿದಂತೆ ಯಾದವಾಡ, ಲಕಮಾಪುರ, ಪುಡಕಲಕಟ್ಟಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next