ಕಲಬುರಗಿ: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ| ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡದಿರುವನ್ನು ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ನಗರದ ಮಹಾನಗರ ಪಾಲಿಕೆ ಇಂದಿರಾ ಸ್ಮಾರಕ ಭವನದ ಗಾಂಧಿ ಪ್ರತಿಮೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸರ್ವಸಂಗ ಪರಿತ್ಯಾಗಿಯಾಗಿ ಸಮಾಜ ಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟಿದ್ದ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡದೇ ಕೇಂದ್ರ ಸರ್ಕಾರ ಅಗೌರವ ತೋರಿದೆ. ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಶಿವಕುಮಾರ ಸ್ವಾಮೀಜಿಗಳಿಗೆ ಪ್ರಶಸ್ತಿ ಕೊಡದಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ನಾಡಿನ ನಡೆದಾಡುವ ದೇವರು ಎಂದೇ ಶ್ರೀಗಳು ಖ್ಯಾತರಾಗಿದ್ದು, ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಅವಧಿಯಲ್ಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ, ಕಾಯಕ ಯೋಗಿ ಶ್ರೀಗಳಿಗೆ ಪ್ರಶಸ್ತಿ ನೀಡುವಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಸಿಗುತ್ತದೆ ಎಂದು ರಾಜ್ಯದ ಜನರು ಆಪೇಕ್ಷೆ ಹೊಂದಿದ್ದರು. ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದರೆ ಪ್ರಶಸ್ತಿ ಮೌಲ್ಯ ಹೆಚ್ಚಾಗುತ್ತಿತ್ತು. ಜನರ ಭರವಸೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ಹುಸಿ ಮಾಡಿದೆ. ಜನರಿಗೆ ಅವಮಾನ ಮಾಡಿದೆ ಎಂದು ಎಂದು ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಕಿಡಿಕಾರಿದರು.
ಎಐಸಿಸಿ ಸದಸ್ಯೆ ಚಂದಿಕಾ ಪರಮೇಶ್ವರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ರವಿ ರಾಠೊಡ, ರೇಣುಕಾ ಚವ್ಹಾಣ, ರೇಣುಕಾ ಶಿಂಧೆ, ವಾಣಿಶ್ರೀ ಸರೋಜಾ, ರಬಿಯಾ ಬೇಗಂ, ಶೋಭಾ, ಶೀಲಾ, ಗೀತಾ, ಸಂಗೀತಾ, ಸಾವಿತ್ರಿಭಾಯಿ, ರೇಣುಭಾಯಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.