ವಿಜಯಪುರ: ಮಹದಾಯಿ ವಿವಾದ ಇತ್ಯರ್ಥಕ್ಕೆ ಪ್ರಧಾನಿ ಅವರ ಮಧ್ಯಪ್ರವೇಶಕ್ಕೆ ಒತ್ತಾಯಿಸಿ ಗುರುವಾರ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಕರೆಗೆ ಬೆಂಬಲಿಸಿ ನಗರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆದವು. ನಂತರ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ವಿವಿಧ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಗೋವಾ ಮುಖ್ಯಮಂತ್ರಿ ಪರಿಕರ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ರೈಲು ತಡೆ ಯತ್ನ: ಮಹಾದಾಯಿ ವಿವಾದ ಇತ್ಯರ್ಥಕ್ಕೆ ಪ್ರಧಾನಿ ಮೋದಿ ಅವರ ಮಧ್ಯಪ್ರವೇಶಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ರೈಲು ತಡೆ ನಡೆಸಲು ಮುಂದಾದರು. ಈ
ಸಂದರ್ಭದಲ್ಲಿ ನಿಲ್ದಾಣದ ಮುಂಭಾಗದಲ್ಲಿಯೇ ರೈಲ್ವೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ಕೆಲಕಾಲ ತಮ್ಮ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ನೇತೃತ್ವ ವಹಿಸಿದ್ದ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಮುಲ್ಲಾ ಮಾತನಾಡಿ, ಇದು ನಮ್ಮ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟ. ಪ್ರಧಾನಿ ಮೋದಿ ಅವರು ಯೋಜನೆ ಇತ್ಯರ್ಥಕ್ಕೆ ಮುಂದಾಗಬೇಕು. ಯಾವುದೇ ಕಾರಣಕ್ಕೂ ವಿಳಂಬ ನೀತಿ ಅನುಸರಣೆ ಮಾಡಬಾರದು ಎಂದು ಆಗ್ರಹಿಸಿದರು.
ಸಂಘಟನೆ ಪ್ರಮುಖರಾದ ಪ್ರಕಾಶ ಕುಂಬಾರ, ಸಾಯಬಣ್ಣ ಮಡಿವಾಳರ, ವಿನೋದ ದಳವಾಯಿ, ಕಲ್ಲು ಸೊನ್ನದ, ಮನೋಹರ ತಾಜವ, ರಾಜೇಂದ್ರಸಿಂಗ ಹಜೇರಿ, ದಯಾನಂದ ಸಾವಳಗಿ,ಆನಂದ ಹಡಗಲಿ, ಸತೀಶ ನರಸರಡ್ಡಿ, ಫಿದಾ ಕಲಾದಗಿ, ರಜಾಕ್ ಕಾಖಂಡಕಿ, ಯಾಕೂಬ್ ಕೋಪರ್, ಅನಿಸ್ ಮಣಿಯಾರ, ಮಲಕುಗೌಡ ಪಾಟೀಲ, ಧರ್ಮು ಸಿಂಧೆ, ಬಳೆನಶೀದ್ ಬಿರಾದಾರ, ಸಾಬು ಕಾಂಬಳೆ, ಮಹಾದೇವ ಒಡೆಯರ, ನಾಗು ಭಜಂತ್ರಿ, ವಿದ್ಯಾನಂದ ನಂದಗಾಂವ, ಪ್ರಕಾಶ ಕಟ್ಟಿಮನಿ, ಗಣೇಶ ಕಾಂಬಳೆ, ಸಮೀರ ಗುದ್ದಗಿ ಪಾಲ್ಗೊಂಡಿದ್ದರು.
ಗಾಂಧಿವೃತ್ತದಲ್ಲಿ ಪ್ರತಿಭಟನೆ: ಕರ್ನಾಟಕ ನವ ನಿರ್ಮಾಣ ಸೇನೆ ಸಂಘಟನೆ ವತಿಯಿಂದ ಗಾಂಧಿವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಪದಾಧಿಕಾರಿಗಳು, ಮಹದಾಯಿ ನದಿ ನೀರಿನ ಹಂಚಿಕೆಯಲ್ಲಿ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು ಪದೇ ಪದೇ ಕರ್ನಾಟಕದ ಜತೆ ಕಾಲುಕೆದರಿ ಜಗಳಕ್ಕೆ ನಿಂತು ಮಾನವೀಯತೆ ಇಲ್ಲದಂತೆ ವರ್ತಿಸುತ್ತಿವೆ.ಆದ್ದರಿಂದ ಪ್ರಧಾನಿ ಮೋದಿ ಅವರು ಕೂಡಲೇ ಮಧ್ಯಸ್ಥಿಕೆ ವಹಿಸಿ ಮಹಾದಾಯಿ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು. ಕಾನೂನು ಬದ್ಧವಾಗಿ ಮಹದಾಯಿ ನೀರು ಬಳಸಿಕೊಳ್ಳಲು ಕರ್ನಾಟಕಕ್ಕೆ ಎಲ್ಲ ರೀತಿಯ ಅರ್ಹತೆ ಇದೆ. ಆದರೆ ಗೋವಾ ರಾಜ್ಯ ವಿನಾಕಾರಣ ಅಡ್ಡಿಪಡಿಸಿ ಕರ್ನಾಟಕದ ಸ್ವಾಭಿಮಾನ ಕೆರಳಿಸುತ್ತಿದೆ ಎಂದು ಆರೋಪಿಸಿದರು. ಮೊಹಸೀನ್ ಜಾಗೀರದಾರ, ಶಬ್ಬೀರ್ ಸಾರವಾಡ, ಚೇತನ ಗುಲೇದ, ಯಾಸೀನ್ ಸೌಧಾಗರ ಇದ್ದರು.
ಕರ್ನಾಟಕ ರಕ್ಷಣಾ ವೇದಿಕೆ: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನಾ ಧರಣಿ ನಡೆಸಲಾಯಿತು. ಪ್ರಧಾನಿ ಅವರು ಕೂಡಲೇ ಮಧ್ಯ ಪ್ರವೇಶಿಸಿ, ಕನಿಷ್ಠ 7.56 ಟಿಎಂಸಿ ಅಡಿ ಕುಡಿಯುವ ನೀರು ಬಿಡುಗಡೆ ಮಾಡಿಸಲು ಗೋವಾ ಸರಕಾರಕ್ಕೆ ಆದೇಶಿಸಬೇಕು ಎಂದು ಒತ್ತಾಯಿಸಿದರು. ವಿವಿಧ ಸಂಘಟನೆ ಪದಾ ಧಿಕಾರಿಗಳಾದ ಹನ್ನಾನ್ ಶೇಖ್, ಸಾಗರ ಲಮಾಣಿ, ಸಾದಿಕ್ ಶೇಖ್ ಪಾಲ್ಗೊಂಡಿದ್ದರು.