Advertisement

ಅಸಂಘಟಿತ ಕಾರ್ಮಿಕರಿಂದ ಪ್ರತಿಭಟನೆ

06:39 AM Feb 01, 2019 | |

ಕಲಬುರಗಿ: ಕೇಂದ್ರ ಸರ್ಕಾರ ತರಲು ಹೊರಟಿರುವ ಸಾಮಾಜಿಕ ಭದ್ರತೆ, ಕಲ್ಯಾಣ ಮತ್ತು ಔದ್ಯೋಗಿಕ, ಆರೋಗ್ಯ, ಸುರಕ್ಷಾ ಕರಡು ಮಸೂದೆ ರದ್ದುಪಡಿಸಬೇಕು. ಕಟ್ಟಡ ಕಾರ್ಮಿಕರ ಪತ್ನಿಗೆ ಹೆರಿಗೆಯಾದರೆ ಆಕೆಯ ಪತಿಗೂ ಹೆರಿಗೆ ರಜೆ ವಿಸ್ತರಣೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘದ ನೇತೃತ್ವದಲ್ಲಿ ನಗರದ ಅಂಚೆ ಕಚೇರಿ ಎದುರು ಅಸಂಘಟಿತ ಕಾರ್ಮಿಕರು ಪ್ರತಿಭಟನೆ ನಡೆಸಿದರು.

Advertisement

ಅಂಚೆ ಇಲಾಖೆ ನೌಕರರ ಮೂಲಕ ಪ್ರಧಾನಿಗಳಿಗೆ ಮನವಿ ಸಲ್ಲಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಜೇಟ್‌ನಲ್ಲಿ ಶೇ.3 ರಷ್ಟು ಅನುದಾನವನ್ನು ಅಸಂಘಟಿತ ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಒದಗಿಸುವಂತೆ, ಕಟ್ಟಡ ಕಾರ್ಮಿಕರ ನೋಂದಣಿ ನವೀಕರಣ ಹಾಗೂ ಸೌಲಭ್ಯ ಕೊಡಿಸುವಲ್ಲಿ ಕಾರ್ಮಿಕರ ಸಂಘಟನೆಗಳ ಪಾತ್ರ ಇರುವುದನ್ನು ಮುಂದುವರಿಸಿಕೊಂಡು ನೋಂದಾಯಿತ ಕಟ್ಟಡ ಕಾರ್ಮಿಕರ ಪತ್ನಿಯರಿಗೆ ಹೆರಿಗೆಯಾದ ಸಂದರ್ಭದಲ್ಲಿ ಪುರುಷ ಕಾರ್ಮಿಕರಿಗೂ ಹೆರಿಗೆ ರಜೆ ನೀಡುವಂತೆ ಒತ್ತಾಯಿಸಿದರು.

ಕಳೆದ ಮಂಡಳಿ ಸಭೆಯಲ್ಲಿ ನಿರ್ಣಯಿಸಿದಂತೆ ಎಲ್‌ಕೆಜಿಯಿಂದ ವಿದ್ಯಾಭ್ಯಾಸದ ಸೌಲಭ್ಯ, ಸ್ವಾಭಾವಿಕ ಮರಣ ಧನ ಸಹಾಯ 2 ಲಕ್ಷ ರೂ., ಮನೆ ಕಟ್ಟಲು ಸಾಲ ಹಾಗೂ ಇತರ ಸೌಲಭ್ಯಗಳ ತೀರ್ಮಾನಗಳನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಲು ಆಗ್ರಹಿಸಿದರು.

ಜಿಲ್ಲಾ ಸಂಚಾಲಕ ಶಂಕರ ಕಟ್ಟಿಸಂಗಾವಿ, ರವಿ ಡೊಂಗರಗಾಂವ್‌, ಅಭಿಲಾಷ ಬಿ., ಫತ್ರು ಪಟೇಲ, ಬಾಬು ಬಡಿಗೇರ, ವೀರಶೆಟ್ಟಿ ಸುಂಠಾಣ, ಚಂದ್ರಕಾಂತ ಹೂಗಾರ, ಗುರು ಘತ್ತರಗಿ ಹಾಗೂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next